ಮೊಬೈಲ್ ಒಡೆದು ಹಾಕ್ತೀನಿ ಹುಷಾರ್ ಎಂದ ನಯನತಾರಾ
ಖ್ಯಾತ ನಟಿ ನಯನತಾರಾ (Nayanthara) ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಭಿಮಾನಿಯ ವಿರುದ್ಧ ಗರಂ ಆಗಿದ್ದಾರೆ. ಇದೇ ರೀತಿ ಮಾಡ್ತಾ ಇದ್ದರೆ ನಿಮ್ಮ ಮೊಬೈಲ್ ಅನ್ನು ಒಡೆದು ಹಾಕುವುದಾಗಿ ಎಚ್ಚರಕೆ ನೀಡಿದ್ದಾರೆ. ಕೋಪಿಸಿಕೊಂಡು ಎಚ್ಚರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಪತಿ ವಿಘ್ನೇಶ್ ಶಿವನ್ (Vignesh Shivan) ಜೊತೆ ನಯನತಾರಾ ಕುಂಭಕೋಣಂ (Kumbakonam) ಬಳಿಯ ಕಾಮಾಕ್ಷಿ ಅಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನೆಚ್ಚಿನ ನಟಿ ಬಂದಿರುವ ವಿಚಾರ ಸ್ಥಳೀಯರಿಗೆ ತಿಳಿಯುತ್ತಿದ್ದಂತೆಯೇ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಶಾಂತವಾಗಿ ಇರುವಂತೆ ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ಕೇಳದಿದ್ದಾಗ ಅನಿವಾರ್ಯವಾಗಿ ಗದರಿದ್ದಾರೆ.
ಸಾಲಾಗಿ ಬನ್ನಿ ಎಲ್ಲರಿಗೂ ಸೆಲ್ಫಿ ಕೊಡುವೆ ಎಂದು ನಯನತಾರಾ ಮನವಿ ಮಾಡಿಕೊಂಡರೂ ಅಭಿಮಾನಿಗಳು ಕೇಳಿಲ್ಲ. ಪರಿಸ್ಥಿತಿಯನ್ನು ಅರಿತ ಅವರು ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಹಾಗಾಗಿ ತರಾತುರಿಯಲ್ಲಿ ಪೂಜೆ ಮುಗಿಸಿ ಹೊರಟಿದ್ದಾರೆ. ಈ ಸಂದರ್ಭದಲ್ಲಿ ವಿಡಿಯೋ ಮಾಡುತ್ತಾ ಬಂದ ಅಭಿಮಾನಿಯ ವಿರುದ್ಧ ಗರಂ ಆದ ನಯನಾ, ಮೊಬೈಲ್ ಒಡೆದು ಹಾಕುವುದಾಗಿ ಎಚ್ಚರಿಸಿದ್ದಾರೆ.
ನಿರಂತರವಾಗಿ ಆ ಅಭಿಮಾನಿ ವಿಡಿಯೋ ಮಾಡುತ್ತಲೇ ಅವರ ಹಿಂದೆ ಸಾಗಿದ್ದಾನೆ. ಅದನ್ನು ಗಮನಿಸಿದ ನಯನತಾರಾ ಮೊದಲು ಮನವಿ ಮಾಡಿಕೊಂಡಿದ್ದಾರೆ. ವಿಡಿಯೋ ನಿಲ್ಲಿಸುವಂತೆ ಹೇಳಿದ್ದಾರೆ. ಅವನು ನಿಲ್ಲಿಸದೇ ಹೋದಾಗ ಖಡಕ್ ಆಗಿಯೇ ಎಚ್ಚರಿಕೆ ನೀಡಿ ವಿಡಿಯೋ ನಿಲ್ಲಿಸಿದ್ದಾರೆ.