ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ? ಚುನಾವಣೆಗೆ ಸಿದ್ಧತೆಗಳು ಪ್ರಾರಂಭ!
ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿರುವಂತೆ ಚುನಾವಣ ಆಯೋಗವೂ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಮೇ 2ನೇ ವಾರದ ಲೆಕ್ಕಾಚಾರ ಇರಿಸಿಕೊಂಡಿದೆ.
ಹಾಲಿ ವಿಧಾನಸಭೆಯ ಅವಧಿ ಈ ವರ್ಷ ಮೇ 24ಕ್ಕೆ ಕೊನೆಗೊಳ್ಳಲಿದೆ. ಅದ ರೊಳಗೆ ಹೊಸ ವಿಧಾನಸಭೆ ರಚನೆ ಯಾಗಬೇಕು. ಕಳೆದ ಬಾರಿ, 2018ರಲ್ಲಿ ಮೇ 12ರಂದು ಮತದಾನ ನಡೆದಿತ್ತು. ಹೆಚ್ಚುಕಡಿಮೆ ಈ ಬಾರಿಯೂ ಇದೇ ಅವಧಿಯಲ್ಲಿ ನಡೆಯಬಹುದು. ಇದೇ ಆಧಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈಗ ಚುನಾವಣೆ ಸಿದ್ಧತೆಗಳಿಗೆ ಮತ್ತಷ್ಟು ವೇಗ ನೀಡಿದೆ.
ಚುನಾವಣೆಗೆ ಮತದಾರರ ಪಟ್ಟಿ ಮುಖ್ಯ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಆಯೋಗ ಸಿದ್ಧಪಡಿಸಿದೆ. ಆದರೂ ಅಂತಿಮ ಮತದಾರರ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಲೋಪಗಳಿದ್ದರೆ ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿ ಕಾರಿಗಳಿಗೆ ಆಯೋಗ ಸೂಚನೆ ನೀಡಿದೆ. ರಾಜಕೀಯ ಪಕ್ಷಗಳಿಗೂ ಮತದಾರರ ಪಟ್ಟಿಯನ್ನು ನೀಡಲಾಗಿದೆ.
ಚುನಾವಣ ಪ್ರಕ್ರಿಯೆಗೆ 3 ಲಕ್ಷ ಸಿಬಂದಿ ಅಗತ್ಯವಿದ್ದು, ಬಹುತೇಕ ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿ ಸಲಾಗುತ್ತದೆ. ಮಾ. 9ರಿಂದ 29ರ ವರೆಗೆ ದ್ವಿತೀಯ ಪಿಯುಸಿ ಮತ್ತು ಮಾ. 31ರಿಂದ ಎ.15ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ. ಇದರ ಬಳಿಕವಷ್ಟೇ ಚುನಾವಣೆ ನಡೆಯಲಿದೆ.