ಮುಡಾ ಕೇಸ್ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲು
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ ಕೇಸ್) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಶುಕ್ರವಾರ ನ್ಯಾಯಾಲಯದ ಆದೇಶದ ಮೇರೆಗೆ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿದ್ದಾರೆ.
ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರು ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮುಡಾದಿಂದ ಹಂಚಿಕೆಯಾದ 14 ನಿವೇಶನಗಳಲ್ಲಿ (ಮುಡಾ ಕೇಸ್) ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಮರುದಿನವೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ಹೊರಬಿದ್ದಿತ್ತು.
ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ದೂರಿನ ಅನ್ವಯ ತನಿಖೆ ಆರಂಭಿಸುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ವಿಶೇಷ ನ್ಯಾಯಾಲಯ ಆದೇಶಿಸಿತ್ತು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 156 (3) ಅಡಿಯಲ್ಲಿ ತನಿಖೆಯನ್ನು ಕೈಗೆತ್ತಿಕೊಳ್ಳಲು ನ್ಯಾಯಾಲಯವು ನಿರ್ದೇಶನಗಳನ್ನು ನೀಡಿದ್ದು, ಇದು ಮ್ಯಾಜಿಸ್ಟ್ರೇಟ್ಗೆ ಅರಿಯಬಹುದಾದ ಅಪರಾಧದ ತನಿಖೆಗೆ ಆದೇಶಿಸುವ ಅಧಿಕಾರವನ್ನು ನೀಡುತ್ತದೆ. ಡಿಸೆಂಬರ್ ತಿಂಗಳ ಒಳಗೆ ತನಿಖಾ ವರದಿಯನ್ನು ಸಲ್ಲಿಸುತ್ತದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಕಲಂ. 156(3) ರ ಅಡಿಯಲ್ಲಿ ಕಾರ್ಯನಿರ್ವಹಿಸುವುದು, ನ್ಯಾಯವ್ಯಾಪ್ತಿಯ ಪೊಲೀಸ್ ಅಂದರೆ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮೈಸೂರು ಇವರಿಗೆ ಈ ಮೂಲಕ ಪ್ರಕರಣವನ್ನು ದಾಖಲಿಸಲು, ತನಿಖೆ ಮಾಡಲು ಮತ್ತು Cr. 173 ರ ಅಡಿಯಲ್ಲಿ ಪರಿಗಣಿಸಿದಂತೆ ವರದಿಯನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತ್ತು.
ನ್ಯಾಯಾಲಯ ಸೂಚಿಸಿದ ಸೆಕ್ಷನ್ಗಳಡಿ ಎಫ್ಐಆರ್ ದಾಖಲಾಗಿದೆ. ಸಿಆರ್ಪಿಸಿ ಸೆಕ್ಷನ್ 156(3)ರ ಅಡಿ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120B, 166, 403, 406, 420, 426, 465, 468, 340, 351ರ ಅಡಿ ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 9, 13ರ ಅಡಿ ಎಫ್ಐಆರ್ ಆಗಿದೆ. ಇನ್ನು ಬೇನಾಮಿ ಆಸ್ತಿ ನಿಷೇಧ ಕಾಯ್ಡೆ ಸೆಕ್ಷನ್ 53 ಮತ್ತು 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 3, 4ರ ಅಡಿ ಎಫ್ಐಆರ್ ದಾಖಲಿಸಲಾಗಿದೆ.
1988 ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 9 ಮತ್ತು 13 ರ ಅಡಿಯಲ್ಲಿ ಮತ್ತು ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯಿದೆ, 1988 ರ ಸೆ.3, 53 ಮತ್ತು 54 ರ ಅಡಿಯಲ್ಲಿ ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯಿದೆ, 2011 ರ 3, 4 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ನ್ಯಾಯಾಲಯವು ಪಟ್ಟಿ ಮಾಡಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ A 1 ಆರೋಪಿಯಾಗಿದ್ದರೆ, ಅವರ ಪತ್ನಿ ಪಾರ್ವತಿ A 2 ಆರೋಪಿಯಾಗಿದ್ದಾರೆ. ಇನ್ನು ಅವರ ಬಾಮೈದಾ ಮಲ್ಲಿಕಾರ್ಜುನ A 3, ಭೂಮಾಲಿಕ ದೇವರಾಜು ಎ4 ಹಾಗೂ ಎ5 ಇತರರು ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ.
ಮುಂದಿನ ಕಾನೂನು ಪ್ರಕ್ರಿಯೆ ಏನು?
ಈಗಷ್ಟೇ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಎಫ್ಐಆರ್ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ತನಿಖೆಗೆ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದಾಗ ಸಿಎಂ ಸಿದ್ದರಾಮಯ್ಯನವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡಬಹುದು. ಅಲ್ಲದೇ ಲೋಕಾಯುಕ್ತ ಬಂಧಿಸುವ ಅಧಿಕಾರವನ್ನೂ ಸಹ ಹೊಂದಿದೆ. ಹೀಗಾಗಿ ಬಂಧನ ಮಾಡಿದರೂ ಮಾಡಬಹುದು. ಇನ್ನು ಸಿಎಂ ಸಿದ್ದರಾಮಯ್ಯ ಕಾನೂನು ಪರಿಣಿತರ ಸಲಹೆ ಮೇರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಮೈಸೂರು, ಸೆ.27: ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಹಿನ್ನಲೆ ಸಿಎಂ ತವರು ಜಿಲ್ಲೆಯಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹೌದು, ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪಂಜು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್ – RTI ಕಾರ್ಯಕರ್ತ ಸ್ಪಷ್ಟನೆ
ಚಾಮರಾಜನಗರ: ಮುಡಾ ಪ್ರಕರಣದಲ್ಲಿ (MUDA Case) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ದಾಖಲಿಸಿದ್ದ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದಾರೆ. ತಮ್ಮ ವಿರುದ್ಧದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸ್ನೇಹಮಯಿ ಕೃಷ್ಣ ಮಾತನಾಡಿ, ಕರುಣಾಕರ ಎಂಬುವರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಕರುಣಾಕರ ಅವರ ಬಳಿ 50 ಸಾವಿರ ರೂ. ಸಾಲ ಪಡೆದಿರುವುದು ನಿಜ. 3 ಲಕ್ಷ ಸಾಲ ಕೊಡಿಸೋದಾಗಿ ಪ್ರಾಮಿಸರಿ ನೋಟ್ (Promissory Note) ಬರೆಸಿಕೊಂಡಿದ್ದರು. ಪ್ರತಿ ತಿಂಗಳು 50 ಸಾವಿರಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ. ಈಗ ನ್ಯಾಯಾಧೀಶರು 50 ಸಾವಿರಕ್ಕೆ ಎಷ್ಟು ಸೇರಿಸಿ ಕೊಡ್ತಿರಾ ಅಂತ ಕೇಳಿದರು. 25 ಸಾವಿರ ಸೇರಿಸಿ 75 ಸಾವಿರ ಕೊಡಲು ಒಪ್ಪಿದ್ದೇನೆ ಎಂದಿದ್ದಾರೆ.
ಅಲ್ಲದೇ ಕರುಣಾಕರ 3 ಲಕ್ಷ ರೂ. ಎಲ್ಲಿ ಕೊಟ್ಟರು ಎಂದು ಪ್ರಶ್ನಿಸಿದ್ದೇನೆ. ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ. ನನ್ನ ವಿರುದ್ಧ ಮೊದಲಿನಿಂದಲೂ ಸಂಚು ನಡೆಯುತ್ತಿದೆ. ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ 22 ಪ್ರಕರಣ ದಾಖಲಾಗಿವೆ. 9 ಪ್ರಕರಣ ಬೋಗಸ್ ಅಂತ ಆಗಿದೆ.
8 ಪ್ರಕರಣಗಳಲ್ಲಿ ನಾನು ನಿರಪರಾಧಿ ಅಂತ ಸಾಬೀತಾಗಿದೆ. 3 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ಚಾಮರಾಜನಗರದಲ್ಲಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
ಕೋರ್ಟ್ಗೆ ಹಾಜರಾಗಿದ್ದ ಸ್ನೇಹಮಯಿ ಕೃಷ್ಣ:
ಹಣ ಕೊಡದೇ ವಂಚನೆ ಮಾಡಿರುವ ಆರೋಪ ಹೊತ್ತಿರುವ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರಿಂದು ಚಾಮರಾಜನಗರದ ಎಸಿಜೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಶುಕ್ರವಾರ ಮಧ್ಯಾಹ್ನ 3.30 ಗಂಟೆಗೆ ವಿಚಾರಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಕಂತಿನ ರೂಪದಲ್ಲಿ ಒಟ್ಟು 3 ಲಕ್ಷ ಹಣ ಪಡೆದು ಬಳಿಕ ಸಾಲ ವಾಪಾಸ್ ಮಾಡದೇ ವಂಚಿಸಿದ್ದಾರೆಂದು ಕರುಣಾಕರ್ ಎಂಬವರು ದೂರು ಕೊಟ್ಟಿದ್ದರು. ಪ್ರಾಮಿಸಿರಿ ನೋಟ್ಗಳನ್ನು ಕೊಟ್ಟು 2018, 2019 ಹಾಗೂ 2020 ರಲ್ಲಿ ಒಟ್ಟು 3 ಲಕ್ಷ ಹಣ ಪಡೆದು ಬಳಿಕ ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ ಎಂದು ದೂರುದಾರ ಕರುಣಾಕರ್ ಕಿಡಿಕಾರಿದ್ದರು. ಆತ ಸ್ನೇಹಮಯಿ ಕೃಷ್ಣ ಅಲ್ಲ ಮೋಸಮಯಿ ಕೃಷ್ಣ, ಹಣ ಪಡೆದು ವಂಚಿಸುವುದೇ ಆತನ ಕೆಲಸ, ನಾನಾ ಸಬೂಬು ಹೇಳಿ, ಅನಾರೋಗ್ಯದ ನೆಪವೊಡ್ಡಿ ಹಣ ಪಡೆದು ಈಗ ಹಣ ವಾಪಾಸ್ ಮಾಡದೇ ವಂಚಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಕುಮಾರಸ್ವಾಮಿಗೆ ಲೋಕಾಯುಕ್ತ ಬುಲಾವ್:
ಬೆಂಗಳೂರು, ಸೆಪ್ಟೆಂಬರ್ 27: ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೆಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್ ಜಾರಿ ಹಿನ್ನೆಲೆ ಇಂದು ಸಂಜೆ ಹೆಚ್ಡಿ ಕುಮಾರಸ್ವಾಮಿ ವಿಚಾರಣೆಗೆ ಹಾಜರಾಗಲಿದ್ದಾರೆ. ಸಂಜೆಯೊಳಗೆ ಹಾಜರಾಗುವುದಾಗಿ ತಿಳಿಸಿದ್ದು, ಏರ್ಪೋರ್ಟ್ನಿಂದ ನೇರವಾಗಿ ಲೋಕಾ ಕಚೇರಿಗೆ ಆಗಮಿಸಲಿದ್ದಾರೆ.
ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಹೆಚ್ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಪೊಲೀಸರಿಂದ ನೋಟಿಸ್ ನೀಡಲಾಗಿತ್ತು. ಆದರೆ ಸೋಮವಾರ ಬೇರೆ ಕೆಲಸವಿರುವುದರಿಂದ ಇಂದೇ ವಿಚಾರಣೆಗೆ ಬರುವುದಾಗಿ ತಿಳಿಸಿದ್ದರು. ಹಾಗಾಗಿ ಬೆಂಗಳೂರು ಏರ್ಪೋರ್ಟ್ನಿಂದ ಹೊರಟು ಯಲಹಂಕ ಬಳಿ ಬರುತ್ತಿರುವ ಕುಮಾರಸ್ವಾಮಿ ಡಿವೈಎಸ್ಪಿ ಬಸವರಾಜ್ ಮುಗುದಂ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಈ ಬಗ್ಗೆ ದೆಹಲಿ ಮಾತನಾಡಿದ್ದ ಹೆಚ್ಡಿ ಕುಮಾರಸ್ವಾಮಿ, ಲೋಕಾಯುಕ್ತದ ಯಾವ ಪೊಲೀಸ್ ಅಧಿಕಾರಿಯೂ ನನ್ನನ್ನು ಭೇಟಿ ಮಾಡಿಲ್ಲ. ಅವರು ನನಗೆ ನೋಟಿಸ್ ನೀಡಿದ್ದಾರೆ ಎಂಬುವುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಹೇಳಿದ್ದರು.
ಗಂಗೇನಹಳ್ಳಿ ಡಿನೋಟಿಫಿಕೆಷನ್ ಪ್ರಕರಣದಲ್ಲಿ ನಾನೇನೂ ತಪ್ಪು ಮಾಡಿಲ್ಲ. ಕಾನೂನಿನ ಪ್ರಕಾರವೇ ಕ್ರಮಕೈಗೊಳ್ಳಾಗಿದೆ. ಸಿಎಂ ಸಿದ್ದರಾಮಯ್ಯ ಕೂಡ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಏಜೆನ್ಸಿಗಳು ಸ್ವಾಧೀನಪಡಿಸಿಕೊಂಡಿರುವ ಹಲವಾರು ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಮುಡಾ ಹಗರಣದಿಂದ ಗಮನ ಬೇರೆಡೆ ಸೆಳೆಯಲು ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ಹಳೆ ಪ್ರಕರಣಗಳನ್ನು ಕೆದಕುತ್ತಿದ್ದಾರೆ ಮತ್ತು ನಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರಾದ ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್ ಇತ್ತೀಚೆಗೆ ಬಿಎಸ್ ಯಡಿಯೂರಪ್ಪ ಮತ್ತು ಹೆಚ್ಡಿ ಕುಮಾರಸ್ವಾಮಿ ವಿರುದ್ಧದ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.