ಮನೆಗೆ ನುಗ್ಗಿದ ಚಿರತೆ: ಕಕ್ಕಾಬಿಕ್ಕಿಯಾದ ಮನೆಯ ನಿವಾಸಿಗಳು, ಚುಚ್ಚುಮದ್ದು ನೀಡಿ ಸೆರೆ!
ಶಿವಮೊಗ್ಗ (ಏ.30): ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವ ಹಾಗೂ ಜನವಸತಿ ಪ್ರದೇಶಗಳಿಗೆ ನುಗ್ಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಜನರು ವಾಸ ಮಾಡುವ ಮನೆಯೊಳಗೆ ಚಿರತೆ ನುಗ್ಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ನಿನ್ನೆ ರಾತ್ರಿ ಮನೆಯೊಂದರ ಕೊಟ್ಟಿಗೆಗೆ ನುಗ್ಗಿ ಅಡಗಿ ಕುಳಿತಿದ್ದ ಚಿರತೆಯನ್ನು (Leopard) ಸ್ಥಳೀಯ ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಗ್ರಾಮದ ಶಿವಕುಮಾರ್ ಗೌಡ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಚಿರತೆ ಸೇರಿತ್ತು. ಇದನ್ನು ಗಮನಿಸಿದ ಮನೆಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.
ಹಂಪಿ ಮೃಗಾಲಯಕ್ಕೆ ಗಾಯಗೊಂಡಿರುವ ಚಿರತೆಯನ್ನು ರವಾನೆ: ಇನ್ನು ನಿನ್ನೆ ರಾತ್ರಿಯಿಂದ ಕೊಟ್ಟಿಗೆಯಲ್ಲಿ ಚಿರತೆಯನ್ನು ಕೂಡಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲು ಮನೆಯ ಹೆಂಚುಗಳನ್ನು ತೆಗೆಯಲು ಕೂಡ ಪ್ರಯತ್ನ ಮಾಡಿದ್ದು, ವಿವಿಧ ಕಸರತ್ತುಗಳನ್ನು ಮಾಡಿದೆ. ಆದರೆ, ಈ ವೇಳೆ ಕೊಟ್ಟಿಗೆಯಲ್ಲಿ ಹೆಚ್ಚು ನೆಗೆದಿರುವ ಕಾರಣ ಚಿರತೆ ಬಿದ್ದು, ಸ್ವಲ್ಪ ಗಾಯಗೊಂಡಿದೆ. ಇನ್ನು ಚಿರತೆಗೆ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈಗ ಸೆರೆ ಹಿಡಿದಿರುವ ಚಿರತೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ರವಾನೆ ಮಾಡಲಾಗಿದೆ.
ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ: ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಎಫ್ಒ) ಸಂತೋಷ್ ಕೆಂಚಪ್ಪ, ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರು ನೇತೃತ್ವದಲ್ಲಿ ನಡೆಸಲಾಯಿತು. ಇನ್ನು ಶಿವಮೊಗ್ಗ ಲಯನ್ ಸಫಾರಿಯ ಅರವಳಿಕೆ ತಜ್ಞ ಡಾ. ಮುರುಳೀಧರ ಸೇರಿದಂತೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ, ಕಾಡಂಚಿನ ಪ್ರದೇಶಗಳಲ್ಲಿ ಮನೆಗೆ ಚಿರತೆ ನುಗ್ಗಿದ್ದರಿಂದ ಜನರು ಆತಂಕಗೊಂಡಿದ್ದಾರೆ. ಜೊತೆಗೆ, ಈ ಚಿರತೆಯನ್ನು ಮರಳಿ ಇದೇ ಅರಣ್ಯ ಪ್ರದೇಶಕ್ಕೆ ಬಿಡಬಾರದು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.