ಮನೆ ಮುಂದೆ ಮಲಗಿದವರ ಮೇಲೆ ಹುಚ್ಚು ನಾಯಿ ದಾಳಿ – 25ಕ್ಕೂ ಅಧಿಕ ಜನ ಆಸ್ಪತ್ರೆ ದಾಖಲು
ಬಳ್ಳಾರಿ: ನಗರದಲ್ಲಿ ಕಳೆದ 2 ತಿಂಗಳ ಹಿಂದೆ ಅಷ್ಟೇ ನಾಯಿ ಕಡಿತಕ್ಕೆ (Dog Bite) ಇಬ್ಬರು ಅಮಾಯಕ ಬಾಲಕರು ಬಲಿಯಾಗಿದ್ದರು. ಘಟನೆ ಮಾಸುವ ಮುನ್ನವೇ ಮತ್ತೊಂದು ಹುಚ್ಚು ನಾಯಿ ದಾಳಿ ಘಟನೆ ವರದಿಯಾಗಿದೆ.
ರಾತ್ರಿ ತಮ್ಮ ಮನೆ ಮುಂದೆ ಮಲಗಿದ್ದವರ ಮೇಲೆ ನಾಯಿ ದಾಳಿ ಮಾಡಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ 2 ತಿಂಗಳ ಹಿಂದೆ ಬಳ್ಳಾರಿ (Bellary) ಬಾದನಟ್ಟಿ ಗ್ರಾಮದಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿ ದಾಳಿ ಮಾಡಿದ್ದು, ಇದರಿಂದ ಇಬ್ಬರು ಮಕ್ಕಳು ಅಸುನೀಗಿದ್ದರು. ಈಗ ಮತ್ತೆ ನಾಯಿ ದಾಳಿಯಿಂದಾಗಿ ಬಳ್ಳಾರಿಯ ಜನತೆ ಬೆಚ್ಚಿ ಬಿದ್ದಿದೆ. ಮಂಗಳವಾರ ಮುಂಜಾನೆ ಬಳ್ಳಾರಿಯ ಕೌಲ್ ಬಜಾರ್ ವ್ಯಾಪ್ತಿಯ ವಾರ್ಡ್ ನಂಬರ್ 30 ರಲ್ಲಿ ವಟ್ಟಲಗೇರಿ ಏರಿಯಾದಲ್ಲಿ ನಾಯಿ ದಾಳಿ ಮಾಡಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹುಚ್ಚು ನಾಯಿ ದಾಳಿ ಮಾಡಿದ್ದು, 25 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮನೆ ಮುಂದೆ ರಾತ್ರಿ ಮಲಗಿದ್ದ ಜನರ ಮೇಲೆ ನಾಯಿ ದಾಳಿ ಮಾಡಿದ್ದು, 6 ಮಹಿಳೆಯರು 7 ಮಕ್ಕಳು ಸೇರಿದಂತೆ ಒಟ್ಟು 25 ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ. ನಾಯಿ ಕಡಿತದ ಬಳಿಕ ಬಳ್ಳಾರಿ ಜಿಲ್ಲೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ನಾಯಿ ದಾಳಿಗೊಳಗಾದ ಜನರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ