ಮಧ್ಯಂತರ ನಿರೀಕ್ಷಣಾ ಜಾಮೀನು ಬೆನ್ನಲ್ಲೇ ಎಸ್ಐಟಿ ವಿಚಾರಣೆಗೆ ಭವಾನಿ ರೇವಣ್ಣ ಹಾಜರು
ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ದೊರೆತ ಬೆನ್ನಲ್ಲೇ ಎಸ್ಐಟಿ ತನಿಖಾಧಿಕಾರಿಗಳ ಎದುರು ಭವಾನಿ ರೇವಣ್ಣ ಹಾಜರಾಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಸಿಐಡಿ ಕಚೇರಿಗೆ ಭವಾನಿ ರೇವಣ್ಣ ಆಗಮಿಸಿದ್ದು, ಎಸ್ಐಟಿ ವಿಚಾರಣೆ ಎದುರಿಸುತ್ತಿದ್ದಾರೆ.
ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಆಲಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮುಂದಿನ ಶುಕ್ರವಾರದವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಅಲ್ಲದೇ ಇಂದು ಮಧ್ಯಾಹ್ನ 1 ಗಂಟೆಗೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಕೆ.ಆರ್.ನಗರ ತಾಲೂಕು ಹಾಗೂ ಹಾಸನ ಜಿಲ್ಲೆಗೆ ಹೋಗುವಂತಿಲ್ಲ. ತನಿಖಾಧಿಕಾರಿಗಳು ಭವಾನಿ ರೇವಣ್ಣರನ್ನು ಬಂಧಿಸಬಾರದು. ವಿಚಾರಣೆ ನೆಪದಲ್ಲಿ ಸಂಜೆ 5 ಗಂಟೆ ನಂತರ ಇರಿಸಿಕೊಳ್ಳುವಂತಿಲ್ಲ ಎಂದು ಆದೇಶಿಸಿತ್ತು.
ಇದಕ್ಕೂ ಮುನ್ನ ಭವಾನಿ ಅವರ ಪರವಾಗಿ ಹಾಜರಾಗಿದ್ದ ವಕೀಲರು, ಅರ್ಜಿದಾರರು ಮಹಿಳೆಯಾಗಿದ್ದು, ಎಫ್ಐಆರ್ನಲ್ಲಿ ಅವರ ಹೆಸರಿಲ್ಲ. ರೇವಣ್ಣ ಮತ್ತು ಸತೀಶ್ ಬಾಬಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಭವಾನಿ ವಿರುದ್ಧ ಬಂಧನ ವಾರೆಂಟ್ ಆದೇಶವನ್ನು ಎಸ್ಐಟಿ ಪಡೆದಿದೆ. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದು ವಿವರಿಸಿದರು.
ಸರ್ಕಾರದ ಪರ ವಕೀಲರು, ಅರ್ಜಿ ಮೊದಲ ಬಾರಿಗೆ ವಿಚಾರಣೆಗೆ ಬಂದಿದೆ. ಇದು ರೇವಣ್ಣ ಜಾಮೀನು ರದ್ದತಿ ಕೋರಿರುವ ಅಪರಾಧಕ್ಕೆ ಸಂಬಂಧಿಸಿದ್ದಾಗಿದೆ. ಆಕ್ಷೇಪಣೆ ಸಲ್ಲಿಸಬೇಕಾಗಿದೆ ಎಂದು ವಿವರಿಸಿದರು. ಈ ವೇಳೆ ನ್ಯಾಯಪೀಠ ಭವಾನಿ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆಯೇ? ಇದಕ್ಕೆ (ಸರ್ಕಾರ) ಉತ್ತರಿಸದಿದ್ದರೆ ರೆಜಿಸ್ಟ್ರಿಯಿಂದ ಪರಿಶೀಲಿಸುತ್ತೇನೆ. ನಾವು ಅರ್ಜಿದಾರರನ್ನು 11.15ಕ್ಕೆ ಎಸ್ಐಟಿ ಮುಂದೆ ಹಾಜರಾಗಲು ಆದೇಶಿಸುತ್ತೇವೆ. ಆದರೆ, ಬಂಧಿಸುವಂತಿಲ್ಲ. ಒಂದು ವಾರದಲ್ಲಿ ಏನೂ ಆಗುವುದಿಲ್ಲ. ಅರ್ಜಿದಾರರು ತನಿಖೆಗೆ ಹಾಜರಾಗಬೇಕು. ಬಂಧಿಸುವಂತಿಲ್ಲ. ಸೋಮವಾರ ವಿಚಾರಣೆ ನಡೆಸುವ ತುರ್ತು ಇಲ್ಲ. ಹಲವು ಬಾಕಿ ಪ್ರಕರಣಗಳು ಇವೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನಡೆಸಿರುವ ಫೋನ್ ಸಂಭಾಷಣೆಯಲ್ಲಿ ಭವಾನಿ ರೇವಣ್ಣ ಅವರ ಪಾತ್ರದ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ. ಆದ್ದರಿಂದ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನ ವಿಚಾರಣೆಗೊಳಪಡಿಸಲು ಎರಡು ಬಾರಿ ಎಸ್ಐಟಿ ನೋಟಿಸ್ ನೀಡಿತ್ತು.