ಮತ್ತೆ ಸ್ಯಾಟಲೈಟ್ ಫೋನ್ ಸದ್ದು: ಕರ್ನಾಟಕ-ಕೇರಳ ಗಡಿಯಲ್ಲಿ ಸಿಗ್ನಲ್ ಪತ್ತೆ
ಮಂಗಳೂರು (ಜ.07): ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಸ್ ಉಗ್ರಗಾಮಿ ಸಂಘಟನೆ ಜತೆ ನಂಟು ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದ ಬೆನ್ನಲ್ಲೇ ರಾಜ್ಯದ ಗಡಿ ಭಾಗದಲ್ಲಿ ಗುರುವಾರ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ನೆರೆಯ ಕೇರಳ ರಾಜ್ಯದ ಕಾಸರಗೋಡು, ಪಾಣಾಜೆ ಗಡಿ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಆಗಿರುವುದು ಪತ್ತೆಯಾಗಿದೆ. ಕೇಂದ್ರ ಗುಪ್ತಚರ ಇಲಾಖೆಯು ಸ್ಯಾಟಲೈಟ್ ಫೋನ್‌ನ ಸಿಗ್ನಲ್ ಅನ್ನು ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಸ್ಪೆಷಲ್ ಬ್ರಾಂಚ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದಕ್ಕೂ ಮೊದಲು, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಘಟನೆಯ ಹಿಂದಿನ ದಿನವಾದ ನವೆಂಬರ್ 18ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಸಮೀಪದ ಕಾಕಂಜೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದ ಬಗ್ಗೆ ವರದಿಯಾಗಿತ್ತು. ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಇರುವಾಗಲೇ ಈ ಪೋನ್ ಕ್ರಿಯಾಶೀಲವಾಗಿದ್ದು ಕಂಡು ಬಂದಿತ್ತು.
ಈ ಮುನ್ನ 2022ರ ಜೂನ್ 1 ರಿಂದ 10 ದಿನಗಳ ಅವಧಿಯಲ್ಲಿ ಮಂಗಳೂರು ಹೊರವಲಯದ ನಟೆಕಲ್, ಕುಳೈ ಹಾಗೂ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಅರಣ್ಯ ಪ್ರದೇಶ ಸೇರಿದಂತೆ ಕರಾವಳಿ, ಮಲೆನಾಡು ಪ್ರದೇಶ ವ್ಯಾಪ್ತಿಯ 4 ಕಡೆ ಫೋನ್ ಸಕ್ರಿಯವಾಗಿದ್ದು ಪತ್ತೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಆಗಾಗ ಸಾಟಲೈಟ್ ಫೋನ್ ಸಕ್ರಿಯವಾಗಿರುವುದು ಪತ್ತೆಯಾದರೂ, ಇದರ ಹಿಂದೆ ಯಾರಿದ್ದಾರೆ ಎಂಬುದು ಪತ್ತೆಯಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ.
ಇದೀಗ ಮತ್ತೆ ಕಾಸರಗೋಡು, ಪಾಣಾಜೆ ಗಡಿ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಆಗಿರುವುದು ಆತಂಕ ಹುಟ್ಟು ಹಾಕಿದೆ. ಈ ಫೋನ್ ಬಳಕೆ ವೇಳೆ ಇನ್ ಮಾರ್ ಸ್ಯಾಟ್ ಹಾಗೂ ತುರಾಯಾ ಜಿಯೋ ಸಿಂಕ್ರೊನಸ್ ವ್ಯವಸ್ಥೆ ಬಳಕೆಯಾಗಿರುವುದನ್ನು ಪೊಲೀಸ್ ತಂಡ ಪತ್ತೆ ಹಚ್ಚಿದೆ. ಆದರೆ, ಸ್ಯಾಟಲೈಟ್ ಫೋನ್ ಸಿಗ್ನಲ್ ನಿಖರವಾಗಿ ಎಲ್ಲಿಂದ ಬಂದಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ.
ಶಂಕಿತ ಉಗ್ರ ಕಾಂಗ್ರೆಸ್ ನಾಯಕನ ಪುತ್ರ: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಂಧಿಸಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ರಿಹಾನ್ ಶೇಖ್ ಕಾಂಗ್ರೆಸ್ ನಾಯಕನ ಮಗ ಎಂದು ಉಡುಪಿ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಆರೋಪಿಸಿದ್ದಾರೆ. ಬಂಧಿತ ರಿಹಾನ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಅವರ ಮಗ. ಉಳ್ಳಾಲ ಶಾಸಕ ಖಾದರ್ ಅವರಿಗೆ ತಾಜುದ್ದೀನ್ ಆಪ್ತ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಜತೆಗೂ ತಾಜುದ್ದೀನ್ ಫೋಟೋಗಳಿವೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.