ಮತಗಟ್ಟೆಯೊಳಗೆ ಬಂದು ವಿವಿಪ್ಯಾಟ್ ಯಂತ್ರವನ್ನೇ ನೆಲಕ್ಕೆಸೆದು ಪುಡಿ ಪುಡಿ ಮಾಡಿದ ಶಾಸಕ; ವಿಡಿಯೋ ವೈರಲ್
ಹೈದರಾಬಾದ್: ಒಂದೆಡೆ ಲೋಕಸಭೆ ಚುನಾವಣೆ(Lok Sabha Election 2024)ಯ ಕಾವು ಹೆಚ್ಚಾಗ್ತಿದೆ. ಮತ್ತೊಂದೆಡೆ ನಾಯಕರು ಮಾಡುತ್ತಿರುವ ಎಡವಟ್ಟುಗಳೂ ದಿನಕ್ಕೊಂದು ಘಟನೆಯಂತೆ ಕಣ್ಣಮುಂದೆ ಬರುತ್ತಿರುತ್ತವೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶ(Andra Pradesh)ದಲ್ಲಿ ಮತದಾನಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಶಾಸಕನೋರ್ವ ಕಪಾಳಮೋಕ್ಷ(Slapped) ಮಾಡಿದ ವಿಚಾರ ಬಹಳ ಸುದ್ದಿಯಾಗಿತ್ತು. ಇದೀಗ ಮತ್ತೋರ್ವ ಶಾಸಕ ವಿವಿಪ್ಯಾಟ್(VVPAT) ಅನ್ನೇ ಎತ್ತಿ ನೆಲಕ್ಕೆ ಬಡಿಯುವ ಮೂಲಕ ಎಲ್ಲರನ್ನು ಆಘಾತಕ್ಕೊಳಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral video) ಆಗುತ್ತಿದೆ
ಆಂಧ್ರಪ್ರದೇಶದ ಪಲ್ವೈ ಗೇಟ್ ಮತಗಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಮಚೇರ್ಲಾ ವಿಧಾನಸಭಾ ಕ್ಷೇತ್ರದ ಶಾಸಕ, ವೈಎಸ್‌ಆರ್‌ಸಿಪಿ(YSRCP) ನಾಯಕರೂ ಆಗಿರುವ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಈ ಕೃತ್ಯ ಎಸಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಏಕಾಏಕಿ ನಾಲ್ಕೈದು ಜನರೊಂದಿಗೆ ಮತಗಟ್ಟೆಯೊಳಗೆ ಬಂದ ರಾಮಕೃಷ್ಣ ರೆಡ್ಡಿಯವರನ್ನು ಕಂಡು ಚುನಾವಣಾಧಿಕಾರಿಗಳು ಎದ್ದು ನಿಲ್ಲುತ್ತಾರೆ. ಅಲ್ಲಿಂದ ನೇರವಾಗಿ ವಿವಿಪ್ಯಾಟ್ ಬಳಿ ಹೋದ ಶಾಸಕ ವಿವಿಪ್ಯಾಟ್ ಯಂತ್ರವನ್ನು ಎತ್ತಿ ನೆಲಕ್ಕೆ ಬಡಿದು ಧ್ವಂಸಗೊಳಿಸಿದ್ದಾರೆ.
ಮೇ 13ರಂದು ಆಂಧ್ರಪ್ರದೇಶದ ಎಲ್ಲಾ 25 ಕ್ಷೇತ್ರಗಳಿಗೆ ನಡೆದ ಮತದಾನದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಂದು ಎಲ್ಲಾ 175 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆದಿದ್ದು, ಅನೇಕ ಕಡೆಗಳಲ್ಲಿ ಹಿಂಸಾಚಾರ, ಅನುಚಿತ ಘಟನೆಗಳು ವರದಿಯಾಗಿದ್ದವು.
On Camera, Andhra MLA Flings VVPAT To Ground In Polling Booth
— NDTV (@ndtv) May 22, 2024
Read Here: https://t.co/CbhZye69mT pic.twitter.com/ttrBCs3X0y
ಟಡಿಎಂ ಖಂಡನೆ:
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಲುಗು ದೇಶಂ ಪಕ್ಷದ ನಾಯಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಸೋಲು ಖಚಿತ ಎಂಬುದು ಮನವರಿಕೆ ಅಗುತ್ತಿದ್ದಂತೆ YSRCP ಮುಖಂಡರು ಈ ರೀತಿ ದಾಂದಲೆ ಎಬ್ಬಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಉತ್ರ ನಾರಾ ಲೋಕೇಶ್ ಈ ಬಗ್ಗೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, YSRCP ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಮತಯಂತ್ರವನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು. ಸೋಲಿನ ಭಯದಿಂದ ಹೀಗೆಲ್ಲ ವರ್ತಿಸುತ್ತಿದ್ದಾರೆ. ಜೂ.4ರಂದು ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಇನ್ನು ಈ ಬಗ್ಗೆ ಚುನಾವಣಾ ಆಯೋಗ ಪ್ರತಿಕ್ರಿಯಿಸಿದ್ದು, ಶಾಸಕ ರೆಡ್ಡಿ ಬರೋಬ್ಬರಿ 7 ಮತಗಟ್ಟೆಗಳಲ್ಲಿ ಮತಯಂತ್ರಗಳನ್ನು ಧ್ವಂಸಗೊಳಿಸುರುವ ವಿಡಿಯೋ ನಮಗೆ ಸಿಕ್ಕಿದೆ. ಎಲ್ಲಾ ಮತಗಟ್ಟೆಗಳ ವಿಡಿಯೋಗಳನ್ನು ಜಿಲ್ಲಾ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದೆ.