ಬ್ರಿಟಿಷ್ ಓಪನ್ ಸ್ಕ್ವಾಶ್: ಭಾರತದ 14 ವರ್ಷದ ಅನಾಹತ್ ಸಿಂಗ್‌ಗೆ ಒಲಿದ ಪ್ರಶಸ್ತಿ
ಬರ್ಮಿಂಗ್‌ಹ್ಯಾಮ್(ಜ.10): ಭಾರತದ ಯುವ ಸ್ಕ್ವಾಶ್ ಪಟು ಅನಾಹತ್ ಸಿಂಗ್ ಪ್ರತಿಷ್ಠಿತ ಬ್ರಿಟಿಷ್ ಜೂನಿಯರ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ 14 ವರ್ಷದ ಅನಾಹತ್ ಬಾಲಕಿಯರ ಅಂಡರ್-15 ವಿಭಾಗದ ಫೈನಲ್‌ನಲ್ಲಿ ಈಜಿಫ್ಟ್‌ನ ಸೊಹೈಲಾ ಹಜೆಂ ವಿರುದ್ಧ 3-1ರಿಂದ ಗೆದ್ದು ಚಿನ್ನ ತಮ್ಮದಾಗಿಸಿಕೊಂಡರು. ಅನಾಹತ್‌ಗೆ ಇದು ಬ್ರಿಟಿಷ್ ಓಪನ್‌ನಲ್ಲಿ 3ನೇ ಫೈನಲ್. ಈ ಮೊದಲು 2019ರಲ್ಲಿ ಅಂಡರ್-11 ವಿಭಾಗದಲ್ಲಿ ಚಾಂಪಿಯನ್ ಆಗಿದ್ದರೆ, 2020ರಲ್ಲಿ ಅಂಡರ್-13 ವಿಭಾಗದಲ್ಲಿ ರನ್ನರ್-ಅಪ್ ಸ್ಥಾನ ಪಡೆದುಕೊಂಡಿದ್ದರು.
2ನೇ ಆಟಗಾರ್ತಿ: ಒಂದಕ್ಕಿಂತ ಹೆಚ್ಚು ಬಾರಿ ಬ್ರಿಟಿಷ್ ಓಪನ್‌ನಲ್ಲಿ ಪ್ರಶಸ್ತಿ ಜಯಿಸಿದ ಭಾರತದ 2ನೇ ಆಟಗಾರ್ತಿ ಎನ್ನುವ ಹಿರಿಮೆಗೆ ಅನಾಹತ್ ಪಾತ್ರರಾಗಿದ್ದಾರೆ. ಈ ಮೊದಲು ಜೋಶ್ನಾ ಚಿನ್ನಪ್ಪ ಈ ಸಾಧನೆ ಮಾಡಿದ್ದರು.
ಇಂದಿನಿಂದ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್
ಕೌಲಾಲಂಪುರ: 2023ರ ಬ್ಯಾಡ್ಮಿಂಟನ್ ಋುತು ಮಂಗಳವಾರದಿಂದ ಮಲೇಷ್ಯಾ ಓಪನ್ ಮೂಲಕ ಆರಂಭಗೊಳ್ಳಲಿದ್ದು, 2022ರಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ್ದ ಭಾರತೀಯ ಶಟ್ಲರ್‌ಗಳು ಈ ವರ್ಷವೂ ಶುಭಾರಂಭ ಮಾಡುವ ವಿಶ್ವಾಸದಲ್ಲಿದ್ದಾರೆ. 85 ವರ್ಷಗಳ ಇತಿಹಾಸವಿರುವ ಕೂಟದಲ್ಲಿ ಭಾರತ ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು 5 ತಿಂಗಳ ಬಳಿಕ ಕಣಕ್ಕಿಳಿಯಲಿದ್ದು, ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸ್ಪೇನ್‌ನ ಕ್ಯಾರೊಲಿನಾ ಮರೀನ್ ವಿರುದ್ಧ ಆಡಲಿದ್ದಾರೆ. ಸೈನಾ ನೆಹ್ವಾಲ್, ಆಕರ್ಷಿ ಕಶ್ಯಪ್, ಮಾಳವಿಕಾ ಕೂಡಾ ಸ್ಪರ್ಧಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನ ಆರಂಭಿಕ ಸುತ್ತಲ್ಲೇ ವಿಶ್ವ ನಂ.10 ಲಕ್ಷ್ಯ ಸೇನ್‌ಗೆ ಭಾರತದವರೇ ಆದ ಎಚ್.ಎಸ್.ಪ್ರಣಯ್ ಸವಾಲು ಎದುರಾಗಲಿದೆ. ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್ ಕೂಡಾ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ.5 ಸ್ವಾತಿಕ್-ಚಿರಾಗ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಸೌದಿಯಲ್ಲಿ ರೊನಾಲ್ಡೋ ಹೋಟೆಲ್ ಬಾಡಿಗೆ ತಿಂಗಳಿಗೆ 2.5 ಕೋಟಿ ರುಪಾಯಿ!
ರಿಯಾದ್: ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ಅಲ್-ನಸ್‌್ರ ಕ್ಲಬ್‌ಗೆ ವಾರ್ಷಿಕ 1775 ಕೋಟಿ ರು. ವೇತನಕ್ಕೆ ಸೇರ್ಪಡೆಯಾಗಿರುವ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ತಿಂಗಳಿಗೆ 2.5 ಕೋಟಿ ರು. ಬಾಡಿಗೆ ಇರುವ ದುಬಾರಿ ಹೋಟೆಲ್‌ನಲ್ಲಿ ನೆಲೆಸಲಿದ್ದಾರೆ ಎಂದು ವರದಿಯಾಗಿದೆ.
ಸೌದಿ ರಾಜಧಾನಿ ರಿಯಾದ್‌ನಲ್ಲಿರುವ ಕಿಂಗ್‌ಡಮ್ ಟವರ್‌ನಲ್ಲಿ ಅವರು ಸದ್ಯಕ್ಕೆ ವಾಸ್ತವ ಹೂಡಿದ್ದಾರೆ ಎಂದು ತಿಳಿದುಬಂದಿದೆ. ರೊನಾಲ್ಡೋ ಹಾಗೂ ಅವರ ಕುಟುಂಬಕ್ಕೆ ಸೇವೆ ನೀಡಲೆಂದೇ ಹೋಟೆಲ್ ಪ್ರತ್ಯೇಕ ಬಾಣಸಿಗರು, ಸಿಬ್ಬಂದಿಯನ್ನು ನೇಮಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸದ್ಯದಲ್ಲೇ ಅವರು ಸ್ವಂತ ಮನೆ ಖರೀದಿಸಲಿದ್ದು, ಸ್ಥಳಾಂತರಗೊಳ್ಳಲಿದ್ದಾರೆ ಎನ್ನಲಾಗಿದೆ.