ಬೆಳ್ಮಣ್: ತಮ್ಮನ ಮನೆಗೆ ಹಾಗೂ ಸ್ವಂತ ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಅಣ್ಣ
ಬೆಳ್ಮಣ್: ತಮ್ಮನ ಮನೆಗೆ ಬೆಂಕಿ ಹಚ್ಚಿ ತಾನೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ತಡರಾತ್ರಿ ನಡೆದಿದೆ.
ಮುಂಡ್ಕೂರು ಗ್ರಾಮದ ಸಚ್ಚರೀ ಪೇಟೆ ಕುದ್ರುಟ್ಟು ನಿವಾಸಿ ಕೃಷ್ಣ ಕುಲಾಲ್ ಬರ್ಬರ ಕೃತ್ಯ ಎಸಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.
ಕೃಷ್ಣ ಕುಲಾಲ್ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಈತ ತನ್ನ ತಮ್ಮ ಶೇಖರ ಕುಲಾಲ್ ಎಂಬವರ ಮನೆಗೆ ತಡರಾತ್ರಿ 3 ಗಂಟೆಗೆ ಬೆಂಕಿಯಿಟ್ಟು ತಾನು ತನ್ನ ಓಮಿನಿಯಲ್ಲಿ ಕುಳಿತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸುಟ್ಟು ಭಸ್ಮವಾಗಿದ್ದಾನೆ. ಶೇಖರನ ಮನೆಯಲ್ಲಿ ಕೃಷ್ಣ ಹಾಗೂ ಶೇಖರನ ಸಹೋದರಿ ಮಗಳ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು ಎನ್ನಲಾಗಿದೆ. ಜಮೀನು ವಿವಾದ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಕೃತ್ಯಕ್ಕೆ ಮುನ್ನ ಕೃಷ್ಣ ಡೆತ್ ನೋಟ್ ಬರೆದು ಕಾಂಪೌಂಡ್ ಗೋಡೆಗೆ ಅಂಟಿಸಿದ್ದು, ಹಲವರ ಹೆಸರು ಉಲ್ಲೇಖಿಸಲಾಗಿದೆ. ಕಾರ್ಕಳ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ