ಬೆಕ್ಕು ಕಿಡ್ನ್ಯಾಪ್ ಮಾಡಿ ಮಂಗಳೂರಿಗೆ ಕಳುಹಿಸಿದ್ದರು: ಪತ್ತೆಯಾಯ್ತು ದೀಪಿಕಾ ದಾಸ್ ಶ್ಯಾಡೋ
ಕಿರುತೆರೆ ನಟಿಯ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ (Deepika Das) ಮೊನ್ನೆಯಷ್ಟೇ ತಮ್ಮ ಮನೆಯ ಬೆಕ್ಕು (cat) ಶ್ಯಾಡೋ (Shadow) ಕಾಣಿಯಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಪ್ರಕಟಿಸಿದ್ದರು. ಇದೀಗ ಬೆಕ್ಕು ಪತ್ತೆಯಾಗಿದೆ. ಅದು ಮಂಗಳೂರಿನಲ್ಲಿ (Mangalore) ಎನ್ನುವುದು ವಿಶೇಷ. ಬೆಂಗಳೂರಿನಿಂದ ಮಂಗಳೂರಿಗೆ ಅದು ಹೇಗೆ ಹೋಯಿತು? ಸದ್ಯಕ್ಕೆ ಸಸ್ಪೆನ್ಸ್.
ತಮ್ಮ ಶ್ಯಾಡೋ ಅನ್ನು ಬೆಂಗಳೂರಿನಲ್ಲಿ ಕಿಡ್ನ್ಯಾಪ್ (Kidnap) ಮಾಡಿ ಮಂಗಳೂರಿಗೆ ಕಳುಹಿಸಿದ್ದರ ಬಗ್ಗೆ ಸ್ವತಃ ದೀಪಿಕಾ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದನ್ನು ಕದ್ದವರು ಯಾರು? ಮಂಗಳೂರಿಗೆ ಹೋಗಿದ್ದು ಹೇಗೆ? ಅದನ್ನು ಹುಡುಕಿದ ಕಥೆ ಏನು? ಹೀಗೆ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಹೇಳಲಿದ್ದಾರಂತೆ ದೀಪಿಕಾ ದಾಸ್. ಸದ್ಯಕ್ಕೆ ಬೆಕ್ಕು ಸಿಕ್ಕಿದೆ. ಹಾಗಾಗಿ ಬಹುಮಾನ ಅವರಲ್ಲೇ ಉಳಿದಿದೆ.
ದೀಪಿಕಾ ದಾಸ್ ಅವರಿಗೆ ಬೆಕ್ಕು ಮತ್ತು ಶ್ವಾನ ಎಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಪ್ರಾಣಿಗಳು ಕೂಡ ಕುಟುಂಬದ ಸದಸ್ಯರಾಗಿದ್ದಾರೆ. ಮನೆಯವರಿಗೆ ಕೊಡುವಷ್ಟೇ ಪ್ರೀತಿಯನ್ನು ಬೆಕ್ಕಿ-ಶ್ವಾನಕ್ಕೆ ಕೊಡುತ್ತಿದ್ದಾರೆ. ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ಶ್ಯಾಡೋ (Shadow) ಕಾಣೆಯಾಗಿದ್ದರ ಬಗ್ಗೆ ಅವರು ತುಂಬಾನೇ ನೊಂದುಕೊಂಡಿದ್ದರು.
ಫೆ.18ರಂದು ರಾತ್ರಿಯಿಂದ ವಿಶ್ವೇಶ್ವರಯ್ಯ ಲೇಔಟ್, 3ನೇ ಬ್ಲಾಕ್, ಉಲ್ಲಾಳು, ಬೆಂಗಳೂರಿನಲ್ಲಿ ಶ್ಯಾಡೋ ಕಾಣೆಯಾಗಿತ್ತು ಎಂದು ನಟಿ ಅಳಲು ತೊಡಿಕೊಂಡಿದ್ದರು. ಈ ಕುರಿತು ಮಾಹಿತಿಯನ್ನು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಶ್ಯಾಡೋ ಅನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಕೊಡಲಾಗುವುದು ಎಂದು ಹತ್ತು ಸಾವಿರದಿಂದ ಹದಿನೈದು ಸಾವಿರ ರೂಪಾಯಿವರೆಗೂ ಹಣವನ್ನು ಘೋಷಣೆ ಮಾಡಿದ್ದರು.