ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ
ಉತ್ತರ ಪ್ರದೇಶ: ಚುನಾವಣೆ ಬಂತೆಂದರೆ ಸಾಕು ಮತಯಂತ್ರ(EVMs)ಗಳ ಕಾರ್ಯಕ್ಷಮತೆ ಬಗ್ಗೆ ಆಗಾಗ ಅನುಮಾನಗಳು ಕೇಳಿ ಬರುವುದು ಸಾಮಾನ್ಯ. ಇದಕ್ಕೆ ಪೂರಕ ಎಂಬಂತೆ ಕೆಲವೊಮ್ಮೆ ಮತಯಂತ್ರಗಳ ಕ್ಷಮತೆ ಮೇಲೆ ಅನುಮಾನ ಹುಟ್ಟಿಸುವಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಹರಿದಾಡುತ್ತಿದ್ದು, ಮತಗಟ್ಟೆಯೊಂದರಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಒಬ್ಬನೇ ವ್ಯಕ್ತಿ ಹಲವು ಬಾರಿ ಮತಹಾಕಿದ್ದಾನೆ. ಈ ವಿಡಿಯೋ ವೈರಲ್(Viral Video) ಆಗುತ್ತಿದ್ದಂತೆ ಪೊಲೀಸರು ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಉತ್ತರಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಾಜನ್ ಸಿಂಗ್ ಎಂಬ ಯುವಕ ತಾನು ಮತ ಚಲಾಯಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಹಲವಾರು ನಾಯಕರು ಎಕ್ಸ್‌ನಲ್ಲಿ ಹಂಚಿಕೊಂಡ ನಂತರ ಆರೋಪಿ ರಾಜನ್ ಸಿಂಗ್ ಎನ್ನುವಾತನನ್ನು ವಶಕ್ಕೆ ಪಡೆಯಲಾಗಿದೆ.
ಎರಡು ನಿಮಿಷಗಳ ಅವಧಿಯ ವೀಡಿಯೊದಲ್ಲಿ, ರಾಜನ್ ಸಿಂಗ್, ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರಿಗೆ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಕನಿಷ್ಠ 8 ಬಾರಿ ಮತ ಚಲಾಯಿಸುವುದನ್ನು ಕಾಣಬಹುದು. ರಜಪೂತ್ ಉತ್ತರ ಪ್ರದೇಶದ ಫರೂಕಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಎಆರ್ ಒ ಪ್ರತೀತ್ ತ್ರಿಪಾಠಿ ಅವರ ದೂರಿನ ಆಧಾರದ ಮೇಲೆ ನಯಾ ಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇನ್ನು ರಾಜನ್ ಸಿಂಗ್ ವಿರುದ್ಧ ಸೂಚನೆ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 171F (ಚುನಾವಣೆಗಳಿಗೆ ಸಂಬಂಧಿಸಿದ ಅಪರಾಧ), ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ವಂಚನೆಗೆ ಶಿಕ್ಷೆ), ಸೆಕ್ಷನ್ 128, 132, ಮತ್ತು 136 ಸೇರಿದಂತೆ ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಜಾಪ್ರತಿನಿಧಿ ಕಾಯಿದೆ (ಮತದಾನದ ಗೌಪ್ಯತೆಯನ್ನು ಕಾಪಾಡುವುದು, ಚುನಾವಣೆಗಳಲ್ಲಿ ವಂಚನೆ ಮತ್ತು ಇತರ ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದೆ) ಮತ್ತು ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ಆಯೋಗ ಕೂಡ ಈ ವಿಷಯದ ಬಗ್ಗೆ ಗಮನಹರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಘಟನೆ ನಡೆದಾಗ ಮತಗಟ್ಟೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ಹೊರಡಿಸಲಾಗಿದೆ.