ಬಿ.ಫಾರ್ಮ್ ಕೊಡೋದು ದೇವೇಗೌಡ್ರು, ನಾನಲ್ಲ: ಕುಮಾರಸ್ವಾಮಿ
ರಾಯಚೂರು (ಜ.27) : ಜೆಡಿಎಸ್ ಪಕ್ಷದ ಬಿ.ಫಾರ್ಮ್ ಅನ್ನು.ಎಚ್.ಡಿ..ದೇವೇಗೌಡ ಅವರೇ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಖಚಿತಪಡಿಸಿದರು.
ಜಿಲ್ಲೆಯ ದೇವದುರ್ಗ ಮತ್ತು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇ ದಿನ ಸಾಗಿದ ಪಂಚರತ್ನ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಪಕ್ಷದ ಬಿ.ಫಾಮ್‌ರ್‍ನ್ನು ಎಚ್.ಡಿ.ದೇವೇಗೌಡರು ಕೊಡುತ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿರುವುದರಲ್ಲಿ ತಪ್ಪಿಲ್ಲ. ಬಿ.ಫಾಮ್‌ರ್‍ಗೆ ಅವರೇ ಸಹಿ ಮಾಡಲಿದ್ದು, ಅಂತಿಮ ತೀರ್ಮಾನವನ್ನು ಅವರೇ ತೆಗೆದುಕೊಳ್ಳಲಿದ್ದಾರೆ.
ಹಾಸನದಲ್ಲಿ ಮಹಿಳೆಗೆ ಟಿಕೆಟ್ ವಿಚಾರ ನಾಲ್ಕೈದು ಜನ ಹೇಳಿದತ್ತ ತಕ್ಷಣ ಅದು ಆಗಲ್ಲ. ಈಗಾಗಲೇ ಜೆಡಿಎಸ್‌ನಿಂದ ನಾಲ್ಕು ಜನರಿಗೆ ಟಿಕೆಟ್ ಘೋಷಣೆ ಮಾಡಿದ್ದೇವೆ. ಸಮರ್ಥ ಅಭ್ಯರ್ಥಿಗಳಿರುವ ಕಡೆ ಕುಟುಂಬದಿಂದ ಯಾರನ್ನು ಸ್ಪರ್ಧೆಗೆ ಇಳಿಸುವುದಿಲ್ಲ. ಅಭಿಮಾನದಿಂದ ಮಾತನಾಡಿದ ಸಂಗತಿಗಳನ್ನು ಅಭಿಪ್ರಾಯಗಳೆಂದು ಪರಿಗಣಿಸಲು ಆಗುವುದಿಲ್ಲ. ಮನೆಯಲ್ಲಿ ಕುಳಿತು ಮತ್ತು ಪಕ್ಷದ ಚೌಕಟ್ಟಿನಡಿಯಲ್ಲಿ ತೀರ್ಮಾನ ಮಾಡಲಾಗುವುದು. ನಮ್ಮ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರುವುದಿಲ್ಲ. ಯಾವುದೇ ರೀತಿಯ ಸಂಘರ್ಷವೂ ಸಹ ಇಲ್ಲ. ಕುತೂಹಲಕ್ಕಾಗಲಿ, ಆತಂಕಕ್ಕಾಗಲಿ ಒಳಗಾಗುವ ಅಗತ್ಯವಿಲ್ಲ ಎಂದರು.
ಸಂಸದೆ ಸುಮಲತಾ ಅವರ ಕುರಿತು ಮಾತನಾಡಿ, ಪ್ರಚಾರ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಹೆಸರನ್ನು ಪ್ರಸ್ತಾಪಿಸದೆ ಟೀಕಿಸಿದರು. ಅವರ ಬಗ್ಗೆ ಮಾತನಾಡುವಷ್ಟುದೊಡ್ಡ ವ್ಯಕ್ತಿ ನಾನಲ್ಲ. ಅವರು ಆಕಾಶದಲ್ಲಿರುವವರು ನಾನು ಭೂಮಿ ಮೇಲಿರುವವನು. ಅವರ ಬಗ್ಗೆ ಮಾತನಾಡಲು ಆಗುತ್ತದೆಯೇ? ಅವರ ಕುರಿತು ಮಾತನಾಡಿ ನಾನು ಪ್ರಚಾರ ಪಡೆಯಲು ಆಗುತ್ತದೆಯೇ? ಅವರ ಬಗ್ಗೆ ಚರ್ಚೆ ಮಾಡುವ ಯೋಗ್ಯತೆಯೂ ಸಹ ನನಗಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಖಚಿತ, 2000 ರು. ಉಚಿತವೆಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಐದು ವರ್ಷಗಳ ಕಾಲ ಅವರೇ ಅಧಿಕಾರದಲಿದ್ದರು. ಆವಾಗ ಯಾಕೆ ಕೊಡಲಿಲ್ಲ? ನಾನು ಅಧಿಕಾರದಲ್ಲಿದ್ದಾಗ ನನಗೆ ಸ್ವತಂತ್ರ ಸರ್ಕಾರವಿರಲಿಲ್ಲ. ಬಡವರ ಕಷ್ಟನೋಡಿಯೇ ಪಂಚರತ್ನ ಯಾತ್ರೆಯನ್ನು ಶುರು ಮಾಡಿದ್ದೇವೆ. ಜೆಡಿಎಸ್‌ಗೆ ಐದು ವರ್ಷ ಅವಕಾಶ ನೀಡಿದ್ದಲ್ಲಿ ಉಚಿತ ಶಿಕ್ಷಣ, ಆರೋಗ್ಯ, ಮನೆ, ವಿದ್ಯುತ್ ಸೇರಿದಂತೆ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲಾಗುವುದು. ನಾನು ಕೊಟ್ಟಮಾತನ್ನು ತಪ್ಪುವುದಿಲ್ಲ. ಒಂದು ವೇಳೆ ಮಾತು ತಪ್ಪಿದರೆ ಇನ್ನೊಮ್ಮೆ ಮತಯಾಚನೆ ಮಾಡುವುದಿಲ್ಲ, ಪಕ್ಷವನ್ನೆ ವಿಸರ್ಜನೆ ಮಾಡುತ್ತೇನೆ ಇದು ನನ್ನ ವಚನವಾಗಿದೆ ಎಂದು ಹೇಳಿದರು.