ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಕೇಸ್ ಗೆ ಸ್ಫೋಟಕ ತಿರುವು; ಎಸ್.ಪಿ ಹೇಳಿದ್ದೇನು?
ಶಿವಮೊಗ್ಗ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದ್ದು, ತಂಗಿಯನ್ನು ಚುಡಾಯಿಸಿದ್ದೇ ಕೃತ್ಯಕ್ಕೆ ಕಾರಣ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಶಿವಮೊಗ್ಗ ಜಿಲ್ಲೆಯ ಸಾಗರದ ಬಿ.ಹೆಚ್ ರಸ್ತೆಯ ಬಳಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ಎಂಬಾತ ಮಚ್ಚು ಬೀಸಿದ್ದ. ಕೂದಲೆಳೆ ಅಂತರದಲ್ಲಿ ಸುನೀಲ್ ಪಾರಾಗಿದ್ದ. ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನ ಪ್ರಕರಣಕ್ಕೆ ಹಿಂದೂ-ಮುಸ್ಲಿಂ ಸಂಘರ್ಷವೇ ಕಾರಣ ಎನ್ನಲಾಗಿತ್ತು. ಆದರೆ ಇದೀಗ ಪ್ರಕರಣಕ್ಕೆ ವೈಯಕ್ತಿಕ ಧ್ವೇಷವೇ ಕಾರಣ ಎಂದು ತಿಳಿದುಬಂದಿದೆ.
ಸಮೀರ್ ಸಹೋದರಿಯನ್ನು ಸುನೀಲ್ ಚುಡಾಯಿಸಿದಕ್ಕೆ ಕೋಪಗೊಂಡ ಸಮೀರ್ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಸ್.ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಅಲ್ಲದೇ ಸುನೀಲ್, ಸಮೀರ್ ಸಹೋದರಿ ಚುಡಾಯಿಸಿದ್ದ ಬಗ್ಗೆ ಫೋನ್ ರೆಕಾರ್ಡ್ ದಾಖಲೆ ಕೂಡ ಸಿಕ್ಕಿದೆ ಎಂದಿದ್ದಾರೆ.
ಸಮೀರ್ ಸಹೋದರಿಯನ್ನು ಸುನೀಲ್ 4-5 ತಿಂಗಳಿಂದ ಚುಡಾಯಿಸುತ್ತಿದ್ದನಂತೆ. ವಿಷಯ ಗೊತ್ತಾಗುತ್ತಿದ್ದಂತೆ ಸಮೀರ್ ಸುನೀಲ್ ಗೆ ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದನಂತೆ. ಆದರೂ ಸುನೀಲ್ ತನ್ನ ಚಾಳಿ ಮುಂದುವರೆಸಿದ್ದ. ಸಮೀರ್ ತಂಗಿಯ ಫೋನ್ ನಂಬರ್ ನ್ನು ಕೇಳಿದ್ದ. ಇದರಿಂದ ಕೋಪಗೊಂದ ಸಮೀರ್ ಹಲ್ಲೆಗೆ ಮುಂದಾಗಿದ್ದಾನೆ. ಸೋಮವಾರ ಸಮೀರ್ ಮೇಕೆಗೆ ಹುಲ್ಲು ತರಲೆಂದು ಹೊಗುತ್ತಿದ್ದಾಗ ಸುನೀಲ್ ಬೈಕ್ ನಲ್ಲಿ ಬರುವುದನ್ನು ಗಮನಿಸಿದ್ದಾನೆ. ಹುಲ್ಲು ಕೊಯ್ಯಲು ಹಿಡಿದಿದ್ದ ಕತ್ತಿಯನ್ನೇ ಹಿಡಿದು ಆತನ ಕಡೆಗೆ ಧಾವಿಸಿ ಹಲ್ಲೆಗೆ ಮುಂದಾಗಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ ಪ್ರಕರಣ ಸಂಬಂಧ ಆರೋಪಿ ಬಂಧನಕ್ಕಾಗಿ ಮೂರು ತಂಡ ರಚನೆ ಮಾಡಲಾಗಿತ್ತು. ಆರೋಪಿ ಸಮೀರ್ ಜತೆ ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನೂ ಬಂಧಿಸಲಾಗಿದೆ. ಸಮೀರ್ ಹಾಗೂ ಈ ಇಬ್ಬರು ಕ್ರಿಕೆಟ್ ಮ್ಯಾಚ್ ಸಂಬಂಧ ಲಾಡ್ಜ್ ನಲ್ಲಿ ಉಳಿದಿದ್ದರು ಎನ್ನಲಾಗಿದೆ. ಅಲ್ಲಿ ಸುನೀಲ್ ಹತ್ಯೆ ಬಗ್ಗೆ ಚರ್ಚೆ ನಡೆಸಿ ಸಂಚು ರೂಪಿಸಿದ್ದರೆ ಎಂಬುದು ವಿಚಾರಣೆಯಿಂದ ತಿಳಿಯಬೇಕಿದೆ ಎಂದು ವಿವರಿಸಿದ್ದಾರೆ.