ಪ್ರಿಯಕರನ ಮೊಬೈಲ್ ನಂಬರ್ ಕೈ ಮೇಲೆ ಬರೆದು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ!
ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿಯ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಯಿಶಾ ಬಿ.ಆರ್. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಬಿಎಸ್ ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಈಕೆ ಇಂದು (ಭಾನುವಾರ) ಬೆಳಗ್ಗೆ ಬಿನ್ನಿ ಮಿಲ್ ಸಮೀಪದ ಪೊಲೀಸ್ ಕ್ವಾರ್ಟರ್ಸ್ ನ ಏಳನೇ ಮಹಡಿಯಿಂದ ಹಾರಿ ಸೂಸೈಡ್ ಮಾಡಿಕೊಂಡಿದ್ದಾಳೆ.
ಭೀಮೇಶ್ ಎಂಬ ಯುವಕನನ್ನು ಆಯಿಶಾ ಪ್ರೀತಿ ಮಾಡುತ್ತಾ ಇದ್ದಳು. ಆದರೆ ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ. ಮನೆಯವರು ಪ್ರೀತಿಯನ್ನು ನಿರಾಕರಿಸಿದ್ದರಿಂದ ತನ್ನ ಪ್ರಿಯಕರನ ಮೊಬೈಲ್ ನಂಬರ್ ಕೈ ಮೇಲೆ ಬರೆದುಕೊಂಡು ತನ್ನ ಸಾವಿನ ವಿಚಾರ ಆತನಿಗೆ ತಿಳಿಸುವಂತೆ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಡೆತ್ನೋಟ್ನಲ್ಲೇನಿದೆ..?: ನನ್ನ ಸಾವಿಗೆ ಕಾರಣ ಯಾರೂ ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದ ಕಾರಣದಿಂದ ನಾನೇ ಸ್ವತಃ ಈ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ನನ್ನ ಕುಟುಂಬಕ್ಕೆ ಹಾಗೂ ಭೀಮೇಶ್ ನಾಯಕ್ ಅವರ ಮೇಲೆ ನೀಡಿದ್ದ ಸುಳ್ಳು ಕೆಸ್ನಿಂದ ತುಂಬಾ ಪಶ್ಚಾತ್ತಾಪಪಟ್ಟುಕೊಳ್ಳುತ್ತಿದ್ದೇನೆ. ಭೀಮೆಶ್ ನಾಯಕ್ ತುಂಬಾತುಂಬಾ ಸೂಕ್ಷ್ಮ ಹಾಗೂ ಮುಗ್ಧ ವ್ಯಕ್ತಿ. ಅವರ ಹಾಗೂ ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕವಿರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸ್ನಿಂದ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ. ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮ ಸ್ನೇಹಿತ ಎಂದೆಲ್ಲ ಬರೆದುಕೊಂಡಿದ್ದಾಳೆ.