ಪ್ರವೀಣ್ ನೆಟ್ಟಾರು ಪತ್ನಿಯನ್ನು ಕೆಲಸಕ್ಕೆ ಮರುನೇಮಕ ಮಾಡಿಕೊಳ್ಳಲಾಗುವುದು - ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಬೆಂಗಳೂರು : ” ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರ ಕೆಲಸದ ವಿಚಾರವಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ಮರು ನೇಮಕ ಮಾಡಲಾಗುವುದು ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಈ ಕುರಿತು ಶನಿವಾರ ಸಂಜೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ” ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು.” ಎಂದು ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಪತ್ನಿಯ ಗುತ್ತಿಗೆ ಕೆಲಸವು ಕೈತಪ್ಪಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ಕಾಂಗ್ರೆಸ್ ಪಕ್ಷಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳ ಸಾಕಷ್ಟು ಪೋಸ್ಟ್‌ಗಳು ವೈರಲ್ ಆಗಿದ್ದವು.
ಕೆಪಿಸಿಸಿ ಟ್ವೀಟ್‌ನಲ್ಲಿ ಏನಿದೆ?
ಪ್ರವೀಣ್ ನೆಟ್ಟಾರು ಕುಟುಂಬದ ಬಗ್ಗೆ ಕಾಳಜಿ ಇದ್ದ ಬಿಜೆಪಿ ತಾತ್ಕಾಲಿಕ ಗುತ್ತಿಗೆ ಕೆಲಸ ನೀಡಿದ್ದೇಕೆ ಎಂದು ಪ್ರಶ್ನಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಈಗ ನೆಟ್ಟಾರು ಕುಟುಂಬಕ್ಕೆ ರಾಜ್ಯ ಬಿಜೆಪಿ ಕಚೇರಿಯಲ್ಲಿಯೇ ಶಾಶ್ವತ ಕೆಲಸ ಕೊಟ್ಟು ಭದ್ದತೆಯನ್ನು ಪ್ರದರ್ಶಿಸಲಿ ಎಂದು ತಿರುಗೇಟು ನೀಡಿದೆ
ಶನಿವಾರ ಸಂಜೆ ಟ್ವೀಟ್ ಮಾಡಿರುವ ಕೆಪಿಸಿಸಿ, ” ಪ್ರವೀಣ್ ನೆಟ್ಟಾರು ಬಿಜೆಪಿ ಕಾರ್ಯಕರ್ತ, ಬಿಜೆಪಿಗೆ ನಿಜಕ್ಕೂ ಆತನ ಕುಟುಂಬದ ಮೇಲೆ ಕಾಳಜಿ ಇದ್ದಿದ್ದೇ ಆದರೆ ತಾತ್ಕಾಲಿಕ ಕೆಲಸ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ಕರ್ನಾಟಕ ರಾಜ್ಯ ಬಿಜೆಪಿ ಕಚೇರಿಯಲ್ಲೆ ಉತ್ತಮ ವೇತನದೊಂದಿಗೆ ಶಾಶ್ವತ ಉದ್ಯೋಗ ಕಲ್ಪಿಸಲಿ. ಬಿಜೆಪಿ ತನ್ನ ಭದ್ದತೆಯನ್ನು ಪ್ರದರ್ಶಿಸಲಿ’ ಎಂದಿದೆ.