ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 49 ಬೌಂಡರಿ ಸಹಿತ 379 ರನ್ – ದಾಖಲೆ ಬರೆದ ಪೃಥ್ವಿ ಶಾ
ಗುವಾಹಟಿ: ಮುಂಬೈ (Mumbai) ಮತ್ತು ಅಸ್ಸಾಂ (Assam) ನಡುವಿನ ರಣಜಿ (Ranji) ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಮುಂಬೈಕರ್ ಪೃಥ್ವಿ ಶಾ (Prithvi Shaw) ಬರೆದಿದ್ದಾರೆ.
ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ 23ರ ಹರೆಯದ ಪೃಥ್ವಿ ಶಾ ಅಸ್ಸಾಂ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದರು. 2ನೇ ದಿನದಾಟದಲ್ಲಿ ಪೃಥ್ವಿ ಶಾ 379 ರನ್ (383 ಎಸೆತ, 49 ಬೌಂಡರಿ, 4 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. 2016ರಲ್ಲಿ ಸಮಿತ್ ಗೂಹೆಲ್ ಆರಂಭಿಕರಾಗಿ ಸಿಡಿಸಿದ 359 ರನ್ ದಾಖಲೆಯಾಗಿತ್ತು. ಈ ದಾಖಲೆಯನ್ನು ಪೃಥ್ವಿ ಶಾ ಮುರಿದಿದ್ದಾರೆ.
ಜೊತೆಗೆ ಮುಂಬೈ ಪರ ರಣಜಿ ಪಂದ್ಯದಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ನೂತನ ದಾಖಲೆಯನ್ನೂ ಬರೆದಿದ್ದಾರೆ. ಈ ಹಿಂದೆ ಮುಂಬೈ ಪರ ಸಂಜಯ್ ಮಾಂಜ್ರೇಕರ್ 377 ರನ್ ಸಿಡಿಸಿದ್ದು, ಹೆಚ್ಚಿನ ರನ್ ಆಗಿತ್ತು. ಈ ದಾಖಲೆಯನ್ನು ಮುರಿದು ನೂತನ ದಾಖಲೆಯನ್ನು ಪೃಥ್ವಿ ಶಾ ಬರೆದಿದ್ದಾರೆ.
379 ರನ್ ಬಾರಿಸಿ ಮುನ್ನಗ್ಗುತ್ತಿದ್ದ ಪೃಥ್ವಿ ಶಾರನ್ನು ಕಡೆಗೆ ರಿಯಾನ್ ಪರಾಗ್ ಎಲ್‍ಬಿಡಬ್ಲ್ಯೂ ಬಲೆ ಬೀಳಿಸಿ ಔಟ್ ಮಾಡಿದರು. ಈ ಮೂಲಕ ಪೃಥ್ವಿ ಶಾ 21 ರನ್‍ಗಳ ಅಂತರದಿಂದ 400 ರನ್ ಸಿಡಿಸುವ ಅವಕಾಶ ವಂಚಿತರಾದರು. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರದ ವಿರುದ್ಧ ಬಿ.ಬಿ ನಿಂಬಾಳ್ಕರ್ 1948-49ರಲ್ಲಿ ಸಿಡಿಸಿದ 443 ರನ್ ಭಾರತೀಯ ಆಟಗಾರನ ಅತೀ ಹೆಚ್ಚಿನ ರನ್ ಗಳಿಕೆಯಾಗಿದೆ.