ಪ್ರಜ್ವಲ್ ರೇವಣ್ಣ ಪ್ರಕರಣ: ವಿಡಿಯೊ ಅಸಲಿ, FSL ವರದಿ ಬಹಿರಂಗ!
ಪ್ರಜ್ವಲ್ ರೇವಣ್ಣ ಪ್ರಕರಣ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳೆಲ್ಲಾ ಅಸಲಿಯಾಗಿದ್ದು, ಯಾವ ವಿಡಿಯೋಗಳನ್ನು ತಿರುಚಿಲ್ಲ ಎಂದು ವಿಧಿ ವಿಜ್ಞಾನ ಪ್ರಯೋಗಾಲಯವು (ಎಫ್ಎಸ್ಎಲ್) ವರದಿ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೊಗಳು ಅಸಲಿ ಎಂಬುದು ಎಫ್ಎಸ್ಎಲ್ ವರದಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದ ವಿಡಿಯೊಗಳನ್ನು ಎಡಿಟ್ ಅಥವಾ ಮಾರ್ಫ್ ಮಾಡಿಲ್ಲ. ಯಾವುದೇ ರೀತಿಯಲ್ಲಿ ಎನಿಮೇಷನ್, ಗ್ರಾಫಿಕ್ಸ್ಗಳನ್ನು ಬಳಸಿಲ್ಲ ಎಂಬುದಾಗಿ ಎಫ್ಎಸ್ಎಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಎಸ್ಐಟಿ ತನಿಖೆಗೆ ಬಲ ಬಂದಂತಾಗಿದೆ.
ಹಾಸನ ಪೆನ್ಡ್ರೈವ್ ಕೇಸ್ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳು ಹಾಗೂ ಪೆನ್ಡ್ರೈವ್ಗಳಿಂದ ಸಾಕಷ್ಟು ಅಶ್ಲೀಲ ವಿಡಿಯೋಗಳನ್ನು ಎಸ್ಐಟಿ ತಂಡ ಸಂಗ್ರಹಿಸಿತ್ತು. ಖಚಿತತೆ ಪಡೆದುಕೊಳಲು ಈ ಎಲ್ಲಾ ವಿಡಿಯೋಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು.
ಸದ್ಯ ಪ್ರಯೋಗಾಲದಿಂದ ಈ ವಿಡಿಯೋಗಳ ಬಗ್ಗೆ ವರದಿ ನೀಡಿದ್ದು, ಅದು ಎಸ್ಐಟಿ ಅಧಿಕಾರಿಗಳ ಕೈಸೇರಿದೆ. ಪ್ರಮುಖವಾಗಿ, ಎಲ್ಲಾ ವಿಡಿಯೋಗಳು ಅಸಲಿಯಾಗಿವೆ. ಯಾವುದೇ ರೀತಿಯ ತಿರುಚುವಿಕೆ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೋಗಳು ಅಸಲಿಯಾಗಿದ್ದರೂ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎನ್ನುವುದು ಸಾಬೀತಾಗಿಲ್ಲ. ಅಶ್ಲೀಲ ವಿಡಿಯೋದಲ್ಲಿರುವ ಪುರುಷನ ಮುಖ ಪ್ರದರ್ಶನವಾಗಿಲ್ಲ. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿಗೂ, ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗೂ ಹೋಲಿಕೆ ಮಾಡಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ವಿಡಿಯೋದಲ್ಲಿರುವ ಮಹಿಳೆರನ್ನು ವಿಚಾರಣೆಗೆ ಒಳಪಡಿಸಿ ಸಾಕ್ಷಿ ಸಂಗ್ರಹ ಮಾಡುವ ಸಾಧ್ಯತೆ ಇದೆ.
ಎಫ್ಎಸ್ಎಲ್ ವಿಡಿಯೋಗಳು ಅಸಲಿ ಎಂದು ವರದಿ ನೀಡಿದ್ದರೂ ಕೆಲ ವಿಡಿಯೋಗಳ ಬಗ್ಗೆ ಎಸ್ಐಟಿ ಸ್ಪಷ್ಟನೆ ಕೇಳಿದೆ. ಎಸ್ಐಟಿಯ ಸ್ಪಷ್ಟನೆಗೆ ಎಫ್ಎಸ್ಎಲ್ ಉತ್ತರ ನೀಡಿದ ಬಳಿಕ ಪ್ರಜ್ವಲ್ ರೇವಣ್ಣ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಪ್ರಜ್ವಲ್ ರೇವಣ್ಣ ಬಂಧಿಸಿ ಎರಡು ತಿಂಗಳು ಸಮೀಪಿಸುತ್ತಿದೆ. ಈಗಾಗಲೇ ಮತ್ತೊಬ್ಬ ಆರೋಪಿ ಎಚ್ಡಿ ರೇವಣ್ಣ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ. ಹೀಗಾಗಿ, ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ ತಂಡ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಲು ಅಗತ್ಯ ತಯಾರಿ ನಡೆಸುತ್ತಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನ್ಯಾಯಾಲಯದಲ್ಲಿಮತ್ತೆ ಹಿನ್ನಡೆಯಾಗಿದೆ. ಮೂರನೇ ಪ್ರಕರಣದಲ್ಲಿಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ನಿರಾಕರಿಸಿದೆ.
ರೇವಣ್ಣ, ಭವಾನಿ ರೇವಣ್ಣಗೂ ಸಂಕಷ್ಟ
ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತೆಯ ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ತಂದೆ ಎಚ್.ಡಿ.ರೇವಣ್ಣ ಅವರು ಕೂಡ ಜೈಲು ಸೇರಿದ್ದರು. ಅವರು ಈಗ ಜಾಮೀನು ಪಡೆದು ಹೊರಬಂದಿದ್ದಾರೆ. ಇದೇ ಪ್ರಕರಣವು ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೂ ಮುಳುವಾಗಿದೆ.