ಪ್ರಚಾರಕ್ಕೆ ತೆರಳುವಾಗ ದಿಢೀರನೆ ಕುಸಿದು ಬಿದ್ದ ಸಿದ್ದರಾಮಯ್ಯ
ಬಳ್ಳಾರಿ: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಶನಿವಾರ ಹೆಲಿಕಾಪ್ಟರ್ ಮೂಲಕ ಕೂಡ್ಲಿಗಿಗೆ ಆಗಮಿಸಿದ ಸಿದ್ದರಾಮಯ್ಯ (Siddaramaiah) ಕಾರು ಹತ್ತುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ.
ಕುಡ್ಲಿಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಎನ್.ಟಿ ಶ್ರೀನಿವಾಸ್ ಪರವಾಗಿ ಸಿದ್ದರಾಮಯ್ಯ ಪ್ರಚಾರಕ್ಕೆ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದ ಅವರು, ಬಳಿಕ ಮೊಬೈಲ್ನಲ್ಲಿ ಬ್ಯೂಸಿಯಾಗಿದ್ದರು. ಕೆಲ ಕ್ಷಣಗಳಲ್ಲೇ ಕಾರು ಹತ್ತುತ್ತಿದ್ದಂತೆ ಕಾರಿನ ಬಾಗಿಲ ಬಳಿ ಕುಸಿದಿದ್ದಾರೆ.
ಸಿದ್ದರಾಮಯ್ಯ ಅವರು ಕುಸಿದು ಬೀಳುತ್ತಿದ್ದಂತೆ ಹಿಡಿದುಕೊಂಡ ವೈದ್ಯರು, ಬಳಿಕ ಕಾರಿನೊಳಗೆ ಕೂರಿಸಿ ಗ್ಲೂಕೋಸ್ ನೀಡಿದರು. ಗ್ಲೂಕೋಸ್ ಕುಡಿದ ಬಳಿಕ ಚೇತರಿಸಿಕೊಂಡ ಸಿದ್ದರಾಮಯ್ಯ ಜನರತ್ತ ಕೈ ಬೀಸಿ ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾದರು. ಬಳಿಕ ಅಭ್ಯರ್ಥಿ ಎನ್.ಟಿ ಶ್ರೀನಿವಾಸ್ ಮನೆಗೆ ತೆರಳಿ ಶುಭ ಹಾರೈಸಿದರು.
ಇದೇ ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿರುವ ಸಿದ್ದರಾಮಯ್ಯ ಅವರು ಕಳೆದ ಕೆಲವು ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಎರಡು ದಿನ ಮಾತ್ರ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದು, ಉಳಿದ ಸಮಯದಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ.