ಪಾಚಿ ತೆಗೆಯಲು ಹೋದ ಯುವಕ ಕೆರೆ ನೀರಲ್ಲಿ ಮುಳುಗಿ ಸಾವು
ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದಿಂದ ವರದಿಯಾಗಿದೆ.
ಪಾಲ್ತಾಡಿ ಗ್ರಾಮದ ಕಾಪುತಮೂಲೆ ನಿವಾಸಿ ಮೋನಪ್ಪ ನಾಯ್ಕ ಎಂಬವರ ಪುತ್ರ ಗೋಪಾಲಕೃಷ್ಣ ಕೆ.(34 ವ.) ಮೃತಪಟ್ಟ ಯುವಕ . ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಬಗ್ಗೆ ಮೃತರ ತಂದೆ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ಗೋಪಾಲಕೃಷ್ಣ ಅವರು ಪಡುಬಿದ್ರೆಯ ಅದಾನಿ ಪವರ್ ಲಿಮಿಟೆಡ್ ಯಪಿಎಸ್ಎಲ್ ಇಲ್ಲಿ ಇಲೆಕ್ಟ್ರಿಕಲ್ ಮೆಂಟೈನೆನ್ಸ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು,ವಾರದ ರಜಾದಿನವಾದ ಗುರುವಾರದಂದು ಮನೆಯಲ್ಲಿ ಇದ್ದ ವೇಳೆ ಕೆರೆಯ ಪಾಚಿ ತೆಗೆಯಲು ಹೋಗಿದ್ದರು .ಈ ವೇಳೆ ಈ ದುರ್ಘಟನೆ ನಡೆದಿದೆ.
ಖುಷಿಯ ಜತೆಗೆ ಆಘಾತ: ಎರಡು ವರ್ಷಗಳ ಹಿಂದೆ ಗೋಪಾಲಕೃಷ್ಣ ಅವರಿಗೆ ವಿವಾಹವಾಗಿದ್ದು ಪತ್ನಿ ಗರ್ಭಿಣಿಯಾಗಿದ್ದಾರೆ. ಪತ್ನಿ ಶಾಲೆಯೊಂದರಲ್ಲಿ ಗೌರವ ಶಿಕ್ಷಿಯಾಗಿದ್ದಾರೆ. ಈಗ ಖುಷಿಯ ನಡುವೆ ಕುಟುಂಬಕ್ಕೆ ಆಘಾತ ತಂದಿಟ್ಟಿದೆ. ಗೋಪಾಲಕೃಷ್ಣ ಅವರ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಮೃತರ ಮನೆಗೆ ಹಲವಾರು ಗಣ್ಯರು ಆಗಮಿಸಿ,ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.ಸೌಮ್ಯ ಸ್ವಭಾವದ ಗೋಪಾಲಕೃಷ್ಣ ಅವರ ನಿಧನದಿಂದ ಚೆನ್ನಾವರ ಪರಿಸರದಲ್ಲಿ ನೀರವ ಮೌನ ಆವರಿಸಿದೆ.