ಶಿವಮೊಗ್ಗ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಅವರ ಭೀಕರ ಕೊಲೆ (Neha Murder Case) ಪ್ರಕರಣದ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಲೆ ಆರೋಪಿ ಫಯಾಜ್ನನ್ನು (Fayaz) ಎನ್ಕೌಂಟರ್ ಮಾಡಬೇಕು ಎಂಬುದಾಗಿ ನೇಹಾ ಹಿರೇಮಠ ಅವರ ತಂದೆ ನಿರಂಜನ್ ಹಿರೇಮಠ ಅವರು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆಯಾಗಬೇಕು ಎಂಬುದಾಗಿ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ನೇಹಾ ಕೊಲೆ ಪ್ರಕರಣ ಸಿಐಡಿಗೆ ವಹಿಸಲು ತೀರ್ಮಾನ ; ಸಿಎಂ ಸಿದ್ದರಾಮಯ್ಯ
![ನೇಹಾ ಕೊಲೆ ಪ್ರಕರಣ ಸಿಐಡಿಗೆ ವಹಿಸಲು ತೀರ್ಮಾನ ; ಸಿಎಂ ಸಿದ್ದರಾಮಯ್ಯ](https://urtv24.com/wp-content/uploads/2024/04/neha-CM-1024x576.jpg)
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ. ಪ್ರಕರಣದ ಕುರಿತು ಕೂಲಂಕಷ ತನಿಖೆಯಾಗಲಿ ಎಂಬ ದೃಷ್ಟಿಯಿಂದ ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಿದ್ದೇವೆ” ಎಂಬುದಾಗಿ ಹೇಳಿದ್ದಾರೆ. ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಲವ್ ಜಿಹಾದ್ ಆರೋಪವೂ ಕೇಳಿಬಂದಿವೆ. ಅದರಲ್ಲೂ, ನೇಹಾ ಹಿರೇಮಠ ಪ್ರಕರಣವು ಚುನಾವಣೆ ಹೊತ್ತಿನಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಹಾಗಾಗಿ, ರಾಜ್ಯ ಸರ್ಕಾರವು ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
9 ಸಲ ಅಲ್ಲ 14 ಬಾರಿ ಇರಿದು ಕೊಂದ ಫಯಾಜ್
ವಿದ್ಯಾರ್ಥಿನಿ ನೇಹಾಳಿಗೆ ಪಾಗಲ್ ಫಯಾಜ್ 9 ಬಾರಿ ಅಲ್ಲ, 14 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಇದಕ್ಕೂ ಮೊದಲು, ನೇಹಾ ಹಿರೇಮಠ್ಗೆ ಫಯಾಜ್ 9 ಬಾರಿ ಚಾಕು ಇರಿದು ಕೊಲೆ ಮಾಡಿದ್ದ ಎಂಬುದಾಗಿ ಹೇಳಲಾಗಿತ್ತು. ಆದರೆ, ಈಗ 14 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾಣೆ ಎಂದು ಮರಣೋತ್ತರ ವರದಿ ತಿಳಿಸಿದೆ. ಏಪ್ರಿಲ್ 19ರಂದು ಬಿವಿಬಿ ಕಾಲೇಜು ಆವರಣದಲ್ಲಿ ಭೀಕರವಾಗಿ ಕೊಲೆ ನಡೆದಿತ್ತು.
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ದಾಳಿ ಮಾಡಿದ್ದ ಫಯಾಜ್ ಕೇವಲ 30 ಸೆಕೆಂಡ್ಗಳಲ್ಲಿ 14 ಬಾರಿ ಇರಿದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನೇಹಾ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಪ್ರೀತಿ ನಿರಾಕರಿಸಿದ ನೇಹಾಳ ಹೃದಯಕ್ಕೆ ಮೊದಲು ಚಾಕು ಇರಿದ ಆತ, 30 ಸೆಕೆಂಡ್ಗಳಲ್ಲೇ 14 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕತ್ತಿನ ಬಳಿ ಚಾಕು ಇರಿಯುತ್ತಿದ್ದಂತೆ ರಕ್ತನಾಳ ಕತ್ತರಿಸಿದ್ದು, ಇದರಿಂದ ತೀವ್ರ ರಕ್ತಸ್ರವಾ ಉಂಟಾಗಿದೆ. ಅತಿಯಾದ ರಕ್ತಸ್ರಾವದಿಂದ ನೇಹಾ ಹಿರೇಮಠ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.