ನಟಿ ಸಂಜನಾ ಗರ್ಲಾನಿ ಮೆಕ್ಕಾ ಮದೀನಾಗೆ ಆಧ್ಯಾತ್ಮಿಕ ಪಯಣ
ನಿನ್ನೆಯಷ್ಟೇ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋವೊಂದನ್ನು (Video) ಪೋಸ್ಟ್ ಮಾಡಿದ್ದರು ನಟಿ ಸಂಜನಾ ಗರ್ಲಾನಿ (Sanjana Girlani). ಆ ವಿಡಿಯೋದಲ್ಲಿ ಅವರು ಬುರ್ಕಾ (Burqa) ಹಾಕಿಕೊಂಡಿದ್ದರು. ಬುರ್ಕಾ ಹಾಕಿರುವುದಕ್ಕೂ ಅವರು ಕಾರಣ ನೀಡಿದ್ದರು. ಆದರೂ, ಕೆಲವರು ಸಂಜನಾ ವಿರುದ್ಧ ನೆಗೆಟಿವ್ ಕಾಮೆಂಟ್ ಹಾಕುತ್ತಿದ್ದಾರೆ. ಆ ವಿಡಿಯೋವನ್ನು ವೈರಲ್ ಮಾಡುವ ಮೂಲಕ ವಿಕೃತ ಆನಂದ ಮೆರೆಯುತ್ತಿದ್ದಾರೆ.
ಸಂಜನಾ ಗರ್ಲಾನಿ ಇದೀಗ ಮೆಕ್ಕಾ ಮದೀನಾಗೆ (Mecca Madina) ಹೊರಟು ನಿಂತಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಅಂತಾನೂ ಹೇಳಿಕೊಂಡಿದ್ದಾರೆ. ಬುರ್ಕಾ ಧರಿಸಿಯೇ ವಿಡಿಯೋ ಮಾಡಿರುವ ಅವರು, ಮೆಕ್ಕಾ ಮದೀನಾಗೆ ಹೊರಟಿರುವ ಕಾರಣದಿಂದಾಗಿಯೇ ತಾವು ಬುರ್ಕಾ ಧರಿಸಿರುವುದಾಗಿಯೂ ತಿಳಿಸಿದ್ದಾರೆ.
ನಟಿ ಸಂಜನಾ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಬಂಧನವಾದಾಗಲೇ ಅವರು ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ ಎಂಬುವವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಗಿತ್ತು. ಸದ್ಯ ಸಂಜನಾ ಸಿನಿಮಾ ರಂಗದಿಂದ ದೂರವಿದ್ದು, ಪತಿ ಮತ್ತು ಮಗುವಿನ ಜೊತೆ ಮೌಲ್ಯಯುತ ವೇಳೆ ಕಳೆಯುತ್ತಿದ್ದಾರೆ. ಅಭಿಮಾನಿಗಳ ಜೊತೆ ಬೆರೆಯುವುದಕ್ಕಾಗಿಯೇ ಅವರು ಯೂಟ್ಯೂಬ್ ಮೂಲಕ ಆಗಾಗ್ಗೆ ವಿಡಿಯೋಗಳನ್ನು ಹಾಕುತ್ತಾರೆ.
ಮೆಕ್ಕಾ ಮದೀನಾಗೆ ಹೋಗುತ್ತಿರುವ ಕುರಿತು ವಿಡಿಯೋ ಮಾಡಿರುವ ಸಂಜನಾ, ‘ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಕಾ ಹಾಕ್ಕೊಂಡು ಏನು ಮಾಡುತ್ತಿದ್ದಾರೆ ಅಂತ ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದವಿರಲಿ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಸಂಜನಾ ಈ ಹಿಂದೆಯೇ ತಮ್ಮ ಹೆಸರನ್ನು ಮಹೀರಾ ಎಂದು ಬದಲಾಯಿಸಿಕೊಂಡಿರುವ ಕುರಿತು ದಾಖಲೆಯೊಂದು ಹರಿದಾಡುತ್ತಿತ್ತು. 2018ರಲ್ಲೇ ಸಂಜನಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರು ತಮ್ಮ ಸೋಷಿಯಲ್ ಮೀಡಿಯಾ ಹೆಸರುಗಳನ್ನು ಸಂಜನಾ ಅಂತಾನೇ ಇನ್ನೂ ಇಟ್ಟುಕೊಂಡಿದ್ದಾರೆ.