ದ್ವೇಷದ ವಿರುದ್ಧ ಪ್ರೀತಿಗೆ ಸಿಕ್ಕ ಜಯ: ರಾಹುಲ್ ಗಾಂಧಿ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ (Congress) ಭರ್ಜರಿಯಾಗಿ ಮುನ್ನಡೆ ಸಾಧಿಸಿ, ಹಲವು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರುತ್ತಿದ್ದಂತೆ ದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ನಾನು ಮೊದಲಿಗೆ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಾವು ಕರ್ನಾಟಕದಲ್ಲಿ ದ್ವೇಷದಿಂದ ಹೋರಾಡಿಲ್ಲ, ಹೃದಯದಿಂದ ಹೋರಾಡಿದ್ದೇವೆ. ದ್ವೇಷದ ಮುಂದೆ ಪ್ರೀತಿ ಗೆಲ್ಲುತ್ತದೆ, ಗೆದ್ದಿದೆ. ಈ ದೇಶದವರಿಗೆ ಗೊತ್ತು ಪ್ರೀತಿ ಇಷ್ಟ ಎಂದು.
ನಾವು ಬಡವರ ಜತೆ ನಿಂತಿದ್ದೆವು. ಇದು ಎಲ್ಲರ ಗೆಲವು. ಇದು ಕರ್ನಾಟಕದ ಜನರ ಗೆಲುವು. ನಾವು 5 ಗ್ಯಾರಂಟಿ ಭರವಸೆಗಳನ್ನು ನೀಡಿದ್ದೆವು. ನಾವು ಆ ಭರವಸೆಗಳನ್ನು ವಿಧಾನಸಭೆ ಕಲಾಪದ ಮೊದಲ ದಿನವೇ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
LIVE: Media Interaction | New Delhi https://t.co/mflXxURASX
— Rahul Gandhi (@RahulGandhi) May 13, 2023
ಕರ್ನಾಟಕದ ಗೆಲುವನ್ನು ಕ್ರೋನಿ ಕ್ಯಾಪಿಟಲಿಸಂ ವಿರುದ್ಧದ ಜನತೆಯ ಗೆಲುವು ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ. ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರೀತಿಯಿಂದಲೇ ನಾವು ದ್ವೇಷವನ್ನು ಕಿತ್ತು ಹಾಕಿದ್ದೇವೆ. ಇದು ಇತರ ಎಲ್ಲ ರಾಜ್ಯಗಳಲ್ಲಿಯೂ ಸಂಭವಿಸುತ್ತದೆ ಎಂದು ಹೇಳಿದರು. ಹೊಸ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪಕ್ಷದ ಭರವಸೆಗಳನ್ನು ಈಡೇರಿಸಲಾಗುವುದು. ಒಂದೆಡೆ ಕ್ರೋನಿ ಕ್ಯಾಪಿಟಲಿಸಂನ ಬಲವಿತ್ತು, ಮತ್ತೊಂದೆಡೆ ಬಡವರ ಬಲವಿತ್ತುಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ ಹೋರಾಟದಲ್ಲಿ ದ್ವೇಷ ಅಥವಾ ನಿಂದನೆ ಕಾಂಗ್ರೆಸ್‌ನ ಅಸ್ತ್ರವಾಗಿರಲಿಲ್ಲ. ನಾವು ಜನರ ಸಮಸ್ಯೆಗಳಿಗಾಗಿ ಹೋರಾಡಿದ್ದೇವೆ ಕರ್ನಾಟಕ ಮೇ ನಫ್ರತ್ ಕಿ ಬಜಾರ್ ಬಂದ್ ಹುಯಿ, ಮೊಹಬ್ಬತ್ ಕಿ ದುಕಾನೇಂ ಖುಲಿ (ಕರ್ನಾಟಕದಲ್ಲಿ ದ್ವೇಷದ ಅಂಗಡಿಗಳು ಮಚ್ಚಿ ಪ್ರೀತಿಯ ಅಂಗಡಿಗಳು ತೆರೆದಿವೆ) ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.