ದುಷ್ಟ ಶಕ್ತಿ ಓಡಿಸುವುದಾಗಿ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ; ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು
ಮುಂಬೈ: ಅಸ್ವಸ್ಥ ಬಾಲಕನ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಕುಟುಂಬಸ್ಥರನ್ನು ನಂಬಿಸಿ ಮಂತ್ರಿವಾದಿ ಓರ್ವ ಮನ ಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಯಭಾಗದ ಶಿರ್ಗೂರಿನಲ್ಲಿ ನಡೆದಿದೆ.ಆರ್ಯನ್ ದೀಪಕ್ ಲಂಡ್ಗೆ(14) ಮೃತ ದುರ್ದೈವಿ ಎಂದು ತಿಳಿದಿ ಬಂದಿದ್ದು ಅಪ್ಪಾ ಸಾಹೇಬ್ ಕಾಂಬ್ಲೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಿರಾಜ್ ತಾಲ್ಲೂಕಿನ ಬಾಲಕ ಆರ್ಯನ್ ಕಳೆದ ಕೆಲವು ದಿನಗಳಿಂದ ತೀವ್ರ ಜ್ಷರದಿಂದ ಬಳಲುತ್ತಿದ್ದ ವೈದ್ಯರು ಹಾಗೂ ಆಯುರ್ವೇದದ ಔಷಧಿಗಳಿಗೂ ಆತ ಗುಣಮುಖನಾಗಿರಲಿಲ್ಲ. ಇದೇ ವೇಳೆ ಆರ್ಯನ್ ಕುಟುಂಬಸ್ಥರಿಗೆ ಸ್ನೇಹಿತರೊಬ್ಬರು ಶಿರಗೂರಿನಲ್ಲಿರುವ ಮಂತ್ರವಾದಿ ಅಪ್ಪಾ ಸಾಹೇಬ್ ಕುರಿತು ಹೇಳಿ ಭೇಟಿ ನೀಡುವಂತೆ ಹೇಳಿದ್ದಾರೆ. ಸ್ನೇಹಿತನ ಮಾತನ್ನು ನಂಬಿದ ಕುಟುಂಬಸ್ಥರು ಅಸ್ವಸ್ಥ ಆರ್ಯನ್ನನ್ನು ಕರೆದುಕೊಂಡು ಶಿರಗೂರಿನಲ್ಲಿರುವ ಅಪ್ಪಾ ಸಾಹೇಬ್ನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಆರೋಪಿಯೂ ಬಾಲಕನ ಮೈಯಲ್ಲಿ ದೆವ್ವ ಹೊಕ್ಕಿದೆ ಎಂದು ಕುಟುಂಬಸ್ಥರನ್ನು ನಂಬಿಸಿ ಆತನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಅಸ್ವಸ್ಥ ಬಾಲಕನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆರ್ಯನ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ವಿಚಾರವನ್ನು ತಿಳಿದ ಅಂಧಶ್ರದ್ಧಾ ನಿರ್ಮೂಲನೆ ಸಮಿತಿ ಸದಸ್ಯರು ಮೃತ ಬಾಲಕಮನ ಕುಟುಂಬಸ್ಥರನ್ನು ಮನವೊಲಿಸಿ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ ಮತ್ತು ಮಂತ್ರವಾದಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.