ದಿಗ್ಗಜ ನಟನ ಸರ್ಪ್ರೈಸ್ ಗಿಫ್ಟ್ ನೋಡಿ ಖುಷಿಯಾದೆ; ರಿಷಬ್ ಶೆಟ್ಟಿಗೆ ವಿಶೇಷ ಪತ್ರ ಬರೆದ ಕಮಲ್ ಹಾಸನ್
ಕಾಂತಾರ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಅನೇಕ ಸಿನಿ ದಿಗ್ಗಜರು ರಿಷಬ್ ಶೆಟ್ಟಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ರಿಷಬ್ ಅವರನ್ನು ಮೆಚ್ಚಿಕೊಂಡವರಲ್ಲಿ ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಕೂಡ ಒಬ್ಬರು. ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಕಮಲ್ ಹಾಸನ್ ಇದೀಗ ರಿಷಬ್ ಶೆಟ್ಟಿ ಅವರಿಗೆ ವಿಶೇಷವಾದ ಪತ್ರ ಬರೆಯುವ ಮೂಲಕ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ. ಕಮಲ್ ಕಡೆಯಿಂದ ಬಂದ ಅಚ್ಚರಿಯ ಗಿಫ್ಟ್ ನೋಡಿ ಮೂಕವಿಸ್ಮಿತನಾದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಕಮಲ್ ಹಾಸನ್ ಮತ್ತು ಸ್ಯಾಂಡಲ್ ವುಡ್‌ಗೆ ವಿಶೇಷವಾದ ನಂಟಿದೆ. ಕನ್ನಡ ಚಿತ್ರರಂಗದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಕಮಲ್ ಹಾಸನ್ ಕನ್ನಡದ ಅನೇಕ ಕಲಾವಿದರ ಜೊತೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಕನ್ನಡ ಸಿನಿಮಾಗಳನ್ನೂ ಇಷ್ಟ ಪಡುವ ಕಮಲ್ ಹಾಸನ್ ಕಾಂತಾರ ನೋಡಿ ಕನ್ನಡ ಸಿನಿಮಾರಂಗದ ಆ ದಿನಗಳು ಮರುಕಳಿಸಿವೆ ಎಂದಿದ್ದರು. ಇದೀಗ ಚಿತ್ರದ ಬಗ್ಗೆ ದೀರ್ಘವಾದ ಪತ್ರ ಬರೆದು ರಿಷಬ್ ಶೆಟ್ಟಿ ಅವರಿಗೆ ಕಳುಹಿಸಿದ್ದಾರೆ.
ಕಮಲ್ ಹಾಸನ್ ಪತ್ರ
ಕಮಲ್ ಹಾಸನ್ ಪತ್ರದಲ್ಲಿ, ‘ಕಾಂತಾರಂಥ ಚಿತ್ರ ನಿಮ್ಮ ಮನದಲ್ಲಿ ಉಳಿದು ಅರಳುತ್ತದೆ. ನಾನು ದೇವರಿಲ್ಲದ ಮನುಷ್ಯ, ಆದರೂ ಹೆಚ್ಚಿನವರಲ್ಲಿ ಒಂದರ ಅಗತ್ಯವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ದ್ರಾವಿಡರಾದ ನಮ್ಮದು ಮಾತೃಪ್ರಧಾನ ಸಮಾಜ. ಅದು ನಿಮ್ಮ ಚಿತ್ರದ ಕೊನೆಯ ದೃಶ್ಯದಲ್ಲಿ ಕಂಡುಬರುತ್ತದೆ, ಅಲ್ಲಿ ದೇವರು ಟೆಸ್ಟೋಸ್ಟೆರಾನ್ ತಂದೆಯಂತೆ ವರ್ತಿಸುವ ಬದಲು ತಾಯಿಯಂತೆ ವರ್ತಿಸುತ್ತೆ’ ಎಂದು ಹೇಳಿದ್ದಾರೆ.
‘ಎಂಟಿ ವಾಸುದೇವನ್ ನಾಯರ್ ಅವರ ನಿರ್ಮಾಲ್ಯಂ ಎಂಬ ಚಿತ್ರವನ್ನು ನೀವು ನೋಡಿರಲಿಲ್ಲ ಎಂದು ನನಗೆ ಗೊತ್ತು. ನಿಮ್ಮ ಚಿತ್ರವು ಆ ಕ್ಲಾಸಿಕ್‌ನ ಛಾಯೆಯನ್ನು ಹೊಂದಿದೆ’ ಎಂದು ಹೇಳಿದ್ದಾರೆ. ಕೊನೆಯಲ್ಲಿ ‘ಈಗಾಗಲೇ ನಾನು ಫೋನ್ನಲ್ಲಿ ಹೇಳಿದಂತೆ ಕಾಂತಾರ ಸಿನಿಮಾದ ದಾಖಲೆಯನ್ನು ನಿಮ್ಮ ಮುಂದಿನ ಸಿನಿಮಾಗಳು ಮುರಿಯಲಿ’ ಎಂದು ಸಲಹೆ ನೀಡುವ ಮೂಲಕ ಕಮಲ್ ಹಾಸನ್ ಪತ್ರವನ್ನು ಪೂರ್ಣಗೊಳಿಸಿದ್ದಾರೆ.
ರಿಷಬ್ ಶೆಟ್ಟಿ ಪ್ರತಿಕ್ರಿಯೆ
ಕಮಲ್ ಹಾಸನ್ ಪತ್ರ ನೋಡಿ ರಿಷಬ್ ಶೆಟ್ಟಿ ಸಂತಸ ಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕಮಲ್ ಹಾಸನ್ ಬರೆದ ಪತ್ರದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಭಾರತೀಯ ಸಿನಿಮಾ ಲೋಕದ ದಿಗ್ಗಜ ನಟನಿಂದ ಈ ಪತ್ರ ಬಂದಿದೆ. ಕಮಲ್ ಸರ್ ನೀಡಿದ ಈ ಅಚ್ಚರಿಯ ಗಿಫ್ಟ್ ನೋಡಿ ಅಪಾರ ಸಂತಸವಾಯಿತು’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಕಮಲ್ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಲ್ ಹಾಸನ ಪತ್ರಕ್ಕೆ ಕನ್ನಡ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಆಸ್ಕರ್ ಅಂಗಳದಲ್ಲಿ ಕಾಂತಾರ
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಈ ಸುದ್ದಿಯನ್ನು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಕಾಂತಾರ ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.