ದಾದಿಯರಿಂದ ಬಲವಂತದ ಸಹಜ ಹೆರಿಗೆ; ಮಗುವನ್ನು ಬಿಟ್ಟು ಬಾಣಂತಿ ಸಾವು
ಚಿಕ್ಕಬಳ್ಳಾಪುರ: ಸಹಜ ಹೆರಿಗೆ ನಂತರ ಬಾಣಂತಿಯ (Pregnant) ಆರೋಗ್ಯದಲ್ಲಿ ಏರುಪೇರಾಗಿ ಒಂದು ದಿನದ ಹೆಣ್ಣು ಶಿಶುವನ್ನು ಬಿಟ್ಟು, ಬಾಣಂತಿ ಮೃತಪಟ್ಟ ಘಟನೆ ನಡೆದಿದೆ. ಮೃತಳ ಸಾವಿಗೆ ಸರ್ಕಾರಿ ಆಸ್ಪತ್ರೆಗಳ ವೈದ್ಯರ ನಿರ್ಲಕ್ಷ್ಯವೆ ಕಾರಣವೆಂದು ಆರೋಪಿಸಿ ಮೃತಳ ಸಂಬಂಧಿಗಳು ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಯ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ನಿವಾಸಿ 21 ವರ್ಷದ ಮೌನಿಕಾ ಮೃತ ಬಾಣಂತಿ. ಶಿಡ್ಲಘಟ್ಟ ತಾಲೂಕು ಆಸ್ಪತ್ರೆ ಆಸ್ಪತ್ರೆಯಲ್ಲಿ ಆಗಿದ್ದೇನು: ಮೌನಿಕಾ ಜನವರಿ 13ರಂದು ಹೆರಿಗೆ ಮಾಡಿಸಿಕೊಳ್ಳಲು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ (sidlaghatta government hospital) ದಾಖಲಾಗಿದ್ದರು. ಆ ದಿನವೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದ್ರೆ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರು ಇರಲಿಲ್ಲವೆಂದು (negligence) ಮೃತಳ ಪೋಷಕರು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ದಾದಿಯರು ಹೆರಿಗೆಗೆ ಮುಂದಾಗಿದ್ರು. ಆಗ ಕರ್ತವ್ಯನಿರತ ವೈದ್ಯೆ ಸುಗುಣ ಎನ್ನುವವರು ಕೇವಲ ಪೋನ್ ನಲ್ಲೆ ಸಲಹೆ ನೀಡಿದ್ದರು. ಬೆಳಿಗ್ಗೆ 3.30 ರ ಸಮಯದಲ್ಲಿ ಮೌನಿಕಾಗೆ ಸಹಜ ಹೆರಿಗೆ ಆಗಿದೆ. ಮುದ್ದಾದ ಹೆಣ್ಣು ಮಗು ಜನಿಸಿದೆ. ಮಗು 3 ಕೆ.ಜಿ. ಇದ್ದು ಆರೋಗ್ಯವಾಗಿದೆ. ನಂತರ ಬೆಳಿಗ್ಗೆ ಬಾಣಂತಿ ಮೌನಿಕಾಗೆ ತೀವ್ರ ರಕ್ತಸ್ರಾವ ಆಗಿದೆ. ಇದ್ರಿಂದ ವಿಚಲಿತರಾದ ಶಿಡ್ಲಘಟ್ಟ ಆಸ್ಪತ್ರೆಯ ವೈದ್ಯರು ಬಾಣಂತಿಯನ್ನು ಚಿಕ್ಕಬಳ್ಳಾಪುರ ಮೇಡಿಕಲ್ ಕಾಲೇಜು ಆಸ್ಪತ್ರೆಗ ರವಾನಿಸಿ, ರಕ್ತಸಿಕ್ತ ಕೈ ತೊಳೆದುಕೊಂಡಿದ್ದಾರೆ (allegation).
ಸಿಮ್ಸ್ ನಲ್ಲಿ ಆಗಿದ್ದೇನು:
ಜನವರಿ 14 ರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮೌನಿಕಾಳನ್ನು ದಾಖಲು ಮಾಡಲಾಯಿತು. ಕಾಲೇಜು ಆಸ್ಪತ್ರೆಯ ವೈದ್ಯರು ತಕ್ಷಣ ಬಾಣಂತಿಗೆ ಚಿಕಿತ್ಸೆ ಆರಂಭಿಸಿದ್ರು. 12 ಗಂಟೆ ಸಮಯದಲ್ಲಿ ಬಾಣಂತಿ ಮೌನಿಕಾಗೆ ಒಂದು ಸಲ ಹಾರ್ಟ್ ಅಟ್ಯಾಕ್ ಆಗಿದೆಯಂತೆ. ವೈದ್ಯರು ಚಿಕಿತ್ಸೆಯಲ್ಲಿದ್ದರು. ಇದರಿಂದ ಬಾಣಂತಿಯನ್ನು ಹೃದಯಾಘಾತದಿಂದ ಪಾರು ಮಾಡಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ಕಾರಣ ಬಾಣಂತಿಗೆ ಮತ್ತೆ ಎರಡು ಬಾಟಲ್ ರಕ್ತ ಸರಬರಾಜು ಮಾಡಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಣಂತಿ ಚಿಕ್ಕಬಳ್ಳಾಪುರದ ಆಸ್ಪತ್ರೆಯಲ್ಲಿ ಜನವರಿ 14ರಂದು ಸುಮಾರು ಸಾಯಂಕಾಲ 4 ಗಂಟೆ ಸಮಯದಲ್ಲಿ ಮೃತಪಟ್ಟಿದ್ದಾಳೆ.
ಮೃತಳ ಸಂಬಂಧಿಗಳ ಆರೋಪವೇನು?:
ಹೆರಿಗೆಗೆಂದು ಶಿಡ್ಲಘಟ್ಟ ತಾಲೂಕು ಆಸ್ಪತ್ರೆಯಲ್ಲಿ ಮೌನಿಕಾ ದಾಖಲು ಆಗಿದ್ದಳು. ಹೆರಿಗೆ ಸಮಯದಲ್ಲಿ ವೈದ್ಯರು ಇರಲಿಲ್ಲ. ದಾದಿಯರು ಮಾತ್ರ ಇದ್ದರು. ದಾದಿಯರು ಬಲವಂತವಾಗಿ ಸಹಜ ಹೆರಿಗೆ ಮಾಡಿಸಿದ್ದಾರೆ. ಸಹಜ ಹೆರಿಗೆ ಆಗುವ ಲಕ್ಷಣಗಳು ಇಲ್ಲದಿದ್ರೂ ದಾದಿಯರು ಬಲವಂತವಾಗಿ ಸಹಜ ಹೆರಿಗೆ ಮಾಡಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಇದ್ದಿದ್ರೆ ಸಿಜೆರಿಯನ್ ಮಾಡುತ್ತಿದ್ದರು. ಕರ್ತವ್ಯ ನಿರತ ವೈದ್ಯೆ ಸುಗುಣ ಆಸ್ಪತ್ರೆಯಲ್ಲಿ ಇರಲಿಲ್ಲ. ಕೇವಲ ಪೋನ್ ನಲ್ಲಿ ಸಲಹೆ ನೀಡಿದ್ದಾರೆ. ಅವರ ಮಾತು ಕೇಳಿಕೊಂಡು ದಾದಿಯರು ನಡೆದುಕೊಂಡಿದ್ದಾರೆ. ಇದ್ರಿಂದ ಮೌನಿಕಾಗೆ ತೀವ್ರ ರಕ್ತಸ್ರಾವ ಆಗಿದೆ. ತಕ್ಷಣ ಸೂಕ್ತ ಚಿಕಿತ್ಸೆ ಸಿಗದೆ ಮೌನಿಕಾ ಆರೋಗ್ಯ ಏರುಪೇರು ಆಗಿದೆ. ಅದಕ್ಕೆ ವೈದ್ಯರ ನಿರ್ಲಕ್ಷ್ಯವೆ ಕಾರಣವೆಂದು ದೂರು ನೀಡಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳ ಸಮಜಾಯಿಷಿ:
ಮೃತಳ ಸಂಬಂಧಿಕರು ಜನವರಿ 17ರಂದು ಶಿಡ್ಲಘಟ್ಟ ತಾಲೂಕು ಆಸ್ಪತ್ರೆ ಮುಂದೆ ಧರಣಿ ನಡೆಸಿದ್ರು. ಆಗ ಸ್ಥಳಕ್ಕೆ ಬಂದ ಚಿಕ್ಕಬಳ್ಳಾಫುರ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶಕುಮಾರ್ ಮತ್ತು ತಾಲೂಕು ಆರೋಗ್ಯಾದಿಕಾರಿ ವೆಂಕಟೇಶಮೂರ್ತಿ ಹಾಗೂ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಂಜ ನಾಯಕ್, ವೈದ್ಯರ ನಿರ್ಲಕ್ಷ್ಯದ ಬಗ್ಗೆ ತನಿಖಾ ತಂಡ ರಚನೆ ಮಾಡಲಾಗಿದೆ. ತನಿಖಾ ತಂಡ ಬಂದು ತನಿಖೆ ನಡೆಸುತ್ತದೆ. ತನಿಖೆಯಲ್ಲಿ ಆರೋಪ ಸಾಬಿತಾದ್ರೆ ವೈದ್ಯರು, ದಾದಿಯರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ ಅದನ್ನು ಪರಿಶೀಲನೆ ನಡೆಸುತ್ತವೆ ಎಂದರು.
ತಾಯಿ ಸಾವು ಮಗು ಆರೋಗ್ಯವಾಗಿದೆ:
ಇನ್ನು 21 ವರ್ಷದ ಮೌನಿಕಾಗೆ ಬಲವಂತವಾಗಿ ಸಹಜ ಹೆರಿಗೆ ಮಾಡಿಸಲಾಗಿದೆ. ಅದರಿಂದಲೇ ತೀವ್ರ ರಕ್ತಸ್ರಾವ ಆಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೆ ಬಾಣಂತಿ ಸಾವು ಎಂದು ಮೃತಳ ಪೋಷಕರು ಆರೋಪ ಮಾಡ್ತಿದ್ದಾರೆ. ಇತ್ತ ಮೃತಳ ಶಿಶು ಆರೋಗ್ಯವಾಗಿದೆ. ಮಗು 3 ಕೆ.ಜಿ ತೂಕ ಇದ್ದು ಆರೋಗ್ಯವಾಗಿದೆ. ಸಂಬಂಧಿಗಳು ಮಗುವನ್ನ ಆರೈಕೆ ಮಾಡ್ತಿದ್ದಾರೆ. ಆದ್ರೆ ವಿಧಿ ತಾಯಿಯನ್ನು ಕಿತ್ತುಕೊಂಡಿದ್ದು ವಿಪರ್ಯಾಸ.
ಕರ್ತವ್ಯದ ಅವಧಿಯಲ್ಲೂ ವೈದ್ಯರ ನಿರ್ಲಕ್ಷ್ಯ ಹೆಚ್ಚಾಗುತ್ತಿದೆಯಾ?
ವೈದ್ಯರ ಕೊರತೆ ನೀಗಿಸಲು ಹಾಗೂ ಎಲ್ಲರಿಗೂ ಎಲ್ಲಡೆಯೂ ಉತ್ತಮ ಚಿಕಿತ್ಸೆ ದೊರೆಯಲಿ ಎನ್ನುವ ಕಾರಣ ರಾಜ್ಯ ಸರ್ಕಾರ ಸರ್ಕಾರಿ ವೈದ್ಯರು ಸರ್ಕಾರಿ ಕರ್ತವ್ಯದ ಅವಧಿ ನಂತರ ಖಾಸಗಿ ಸೇವೆ ಮಾಡಬಹುದು ಎನ್ನುವ ಆದೇಶ ಹೊರಡಿಸಿದ್ದೆ ತಡ, ವೈದ್ಯರು ಬಾಲವಿಲ್ಲದ ಗಾಳಿಪಟದಂತಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಂಜೆ 4 ಗಂಟೆಯ ನಂತರ ವೈದ್ಯರುಗಳು ಆಸ್ಪತ್ರೆಯಲ್ಲಿ ಸಿಗಲ್ಲ, ಡ್ಯೂಟಿ ಡಾಕ್ಟರುಗಳು ಸಹ ಖಾಸಗಿ ಕ್ಲಿನಿಕ್ ಗಳತ್ತ ಮುಖ ಮಾಡಿರುತ್ತಾರೆ. ಬಡವರ ಸೇವೆಯ ಬದಲು ಖಾಸಗಿ ಸೇವೆಯತ್ತ ಚಿತ್ತ ಹರಿಸಿರುತ್ತಾರೆ ಎನ್ನುವ ಆರೋಪಗಳು ಪದೆ ಪದೆ ಕೇಳಿ ಬರುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಂತೂ ವಾರಕ್ಕೊಂದು ತಿಂಗಳಿಗೊಂದು ಬಾಣಂತಿ ಸಾವು ಸಂಭವಿಸುತ್ತಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.