ತೆರಿಗೆ ಇಲಾಖೆ ವಿರುದ್ದ ಹೈಕೋರ್ಟ್ ಮೆಟ್ಟಿಲು ಏರಿದ ನಟಿ ಅನುಷ್ಕಾ ಶರ್ಮಾ

ನಟಿ ಅನುಷ್ಕಾ ಶರ್ಮಾ ತೆರಿಗೆ ಇಲಾಖೆಯ ಅಧಿಕಾರಿಗಳ ವಿರುದ್ದ ಗರಂ ಆಗಿದ್ದಾರೆ. ಇಲಾಖೆಗಳ ನಡೆಗೆ ಬೇಸತ್ತು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಸುಳ್ಳು ತೆರಿಗೆ ಹಾಕಿ, ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಈ ಹಿಂದೆ ತೆರಿಗೆ ಇಲಾಖೆಯು ಮಾರಾಟಕ್ಕೆ ಸಂಬಂಧಿಸಿದಂತೆ 2012-13 ಹಾಗೂ 2013-14ನೇ ಸಾಲಿನ ತೆರಿಗೆಯನ್ನು ಪಾವತಿಸುವಂತೆ ಮಾರಾಟಾ ತೆರಿಗೆ ಇಲಾಖೆ ಆಯುಕ್ತರು ಸೂಚಿಸಿದ್ದರು. ಇದನ್ನು ಪ್ರಶ್ನೆ ಮಾಡಿ ನಟಿ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಅನುಷ್ಕಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಪಾಲ್ಗೊಂಡಿದ್ದಾರೆ. ನಿರೂಪಣೆ ಮಾಡಿದ್ದಾರೆ. ದೇಶ ವಿದೇಶಗಳ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರೂ, ಮಾರಾಟ ತೆರಿಗೆಯನ್ನು ಪಾವತಿಸಿಲ್ಲ. ಹಾಗಾಗಿ ಕೂಡಲೇ ಪಾವತಿಸಬೇಕು ಎಂದು ಮಾರಾಟ ತೆರಿಗೆ ಆಯುಕ್ತರು ಸೂಚಿಸಿದ್ದರು.
ಈ ಕಾರ್ಯಕ್ರಮಗಳು ಹಾಗೂ ಸಮಾರಂಭಗಳು ಮಾರಾಟ ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಮತ್ತು ಆಯಾ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ಅನುಷ್ಕಾ ಹೊಂದಿಲ್ಲವೆಂದು ಇವರ ತೆರಿಗೆ ಸಲಹೆಗಾರರು ಮೊದಲು ಕೋರ್ಟ್ ಮೆಟ್ಟಿಲು ಏರಿದ್ದರು. ಆದರೆ, ಸ್ವತಃ ಅನುಷ್ಕಾ ಅವರೇ ಅರ್ಜಿ ಸಲ್ಲಿಸಬೇಕು ಎಂದು ಬಾಂಬೆ ಹೈಕೋರ್ಟ್ ಸಲಹೆ ನೀಡಿತ್ತು. ಕೋರ್ಟ್ ಸಲಹೆ ಮೇರೆಗೆ ಅನುಷ್ಕಾ ಅವರೇ ಕೋರ್ಟ್ ಮೆಟ್ಟಿಲು ಏರಿದ್ದಾರೆ.
ತಾವು ಮಾಡಿರುವ ಕಾರ್ಯಕ್ರಮಗಳ ಪ್ರಸಾರದ ಹಕ್ಕನ್ನು ತಾವು ಮಾರಾಟ ಮಾಡಿಲ್ಲ. ಅದರ ಹಕ್ಕುಗಳು ತಮ್ಮ ಬಳಿ ಇಲ್ಲ. ಕಾರ್ಯಕ್ರಮಗಳನ್ನು ಮಾಡಿದ ಸಂಸ್ಥೆಗಳೇ ಅದರ ರೈಟ್ಸ್ ಹೊಂದಿರುವುದರಿಂದ ಸುಖಾಸುಮ್ಮನೆ ತಮಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್ ಅನ್ನು ಕೈ ಬಿಡಬೇಕು ಎಂದು ಕೋರ್ಟ್ ಗೆ ಅನುಷ್ಕಾ ಮನವಿ ಮಾಡಿದ್ದಾರೆ. ಈ ಕುರಿತು ಮಾರಾಟ ತೆರಿಗೆ ಇಲಾಖೆಗೆ ಉತ್ತರಿಸುವಂತೆ ಕೋರ್ಟ್ ಸೂಚನೆ ನೀಡಿದೆ.