ಟ್ಯೂಷನ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಗೂಡ್ಸ್ ವಾಹನ ಹರಿದು ಇಬ್ಬರು ಮಕ್ಕಳು ಮೃತ್ಯು ; 5 ಮಕ್ಕಳಿಗೆ ಗಾಯ!
ರಾಮನಗರ : ಕಾರು ಹರಿದು ಇಬ್ಬರು ಶಾಲಾ ಮಕ್ಕಳ ಸಾವನ್ನಪ್ಪಿದ್ದು, ಐದಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿರುವಂತಹ ಘಟನೆ ರಾಮನಗರದ ಲಕ್ಷ್ಮೀಪುರ ಬಳಿ ನಡೆದಿದೆ. ಶಾಲಿನಿ(8), ದರ್ಶನ್ (5) ಮೃತ ದುರ್ದೈವಿಗಳು. ಉಳಿದ ಮಕ್ಕಳಿಗೆ ರಾಮಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಾಮನಗರ ಗ್ರಾಮಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಚಾಲಕನಿಂದ ಹಣ ಪಡೆದು ವಂಚಿಸಿದ ಯುವತಿ:
ಬೆಂಗಳೂರು, ಆ.9- ಯುವತಿಯೊಬ್ಬಳು ಫೋನ್‍ಪೇ ಮಾಡುವುದಾಗಿ ನಂಬಿಸಿ ವಿಕಲಚೇತನ ಆಟೋ ಚಾಲಕನಿಂದ 23,500ರೂ. ಪಡೆದು ವಂಚಿಸಿರುವ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗರಬಾವಿಯ ಮಹದೇಶ್ವರ ಲೇಔಟ್ ನಿವಾಸಿ ಶಿವಕುಮಾರ್ ಎಂಬುವವರೇ ಯುವತಿಯಿಂದ ವಂಚನೆಗೊಳಗಾದ ಆಟೋ ಚಾಲಕ.
ಆ.4ರಂದು ಶಿವಕುಮಾರ್ ಅವರು ಎಂದಿನಂತೆ ಆಟೋ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಚಂದ್ರಾ ಲೇಔಟ್ ಬಳಿ ಯುವತಿಯೊಬ್ಬಳು ಆಟೋ ಹತ್ತಿದ್ದಾಳೆ. ಆ ಸಂದರ್ಭದಲ್ಲಿ ಶಿವಕುಮಾರ್ ತಮ್ಮ ಮೊಬೈಲ್‍ನಲ್ಲಿ ಸ್ನೇಹಿತನ ಜತೆ ಮಾತನಾಡುತ್ತ ಪಿಇಎಸ್ ಕಾಲೇಜು ಬಳಿ ಬಂದು ಹಣ ಕೊಡುವಂತೆ ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದಾಳೆ.
ಆಟೋ ಪಿಇಎಸ್ ಕಾಲೇಜು ಬಳಿ ಬರುತ್ತಿದ್ದಂತೆ ಚಾಲಕನ ಸ್ನೇಹಿತ ಹಣ ಕೊಟ್ಟು ಹೋಗಿದ್ದಾರೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಯುವತಿ ನಾನು ಕಾಲೇಜಿನಲ್ಲಿ ಫೀಜ್ ಕಟ್ಟಬೇಕು. ಫೋನ್‍ಪೇ ತೆಗೆದುಕೊಳ್ಳುವುದಿಲ್ಲ. ನಿಮ್ಮ ಬಳಿ ಇರುವ ಹಣ ನನಗೆ ಕೊಡಿ. ನಾನು ಎಟಿಎಂ ಕಾರ್ಡ್ ತಂದಿಲ್ಲ. ನಿಮಗೆ ಫೋನ್‍ಪೇ ಮಾಡುತ್ತೇನೆ ಎಂದು ಹೇಳಿದ್ದಾಳೆ.ಯುವತಿಯ ಮಾತನ್ನು ನಂಬಿದ ಆಟೋ ಚಾಲಕ ತನ್ನ ಬಳಿ ಇದ್ದ 23,500ರೂ. ಕೊಟ್ಟಿದ್ದಾರೆ. ನಂತರ ಆ ಯುವತಿ ಫೋನ್‍ಪೇ ಮಾಡಿಲ್ಲ. ಮೆಸೇಜ್ ಬಂದಿದೆ ನೋಡಿ ಎಂದು ಹೇಳಿದ್ದಾಳೆ. ಚಾಲಕ ಶಿವಕುಮಾರ್ ಅವರಿಗೆ ಮೆಸೇಜ್ ಓಪನ್ ಮಾಡಲು ಬರಲಿಲ್ಲ. ನಿಮಗೆ ಹಣ ಬರದಿದ್ದರೆ ನನಗೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋಗಿದ್ದಾಳೆ.
ಕೆಲ ಸಮಯದ ಬಳಿಕ ಆ ಯುವತಿ ನೀಡಿದ್ದ ನಂಬರ್‍ಗೆ ಫೋನ್ ಮಾಡಿದಾಗ ಸ್ವಿಚ್‍ಆಫ್ ಬಂದಿದೆ. ನಂತರ ತಾನು ಮೋಸ ಹೋದೆನೆಂದು ಅರಿತು ನಂತರ ಗಿರಿನಗರ ಫೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಫೋಲೀಸರು ವಂಚಕಿ ಯುವತಿಗಾಗಿ ಶೋಧ ನಡೆಸುತ್ತಿದ್ದಾರೆ.