ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿಎಂ ಇಬ್ರಾಹಿಂ
ಬೆಂಗಳೂರು (ಮೇ 24): ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಗೆಲ್ಲುವುದಕ್ಕೆ ಸಾಧ್ಯವಾಗಿದ್ದು, ಹೀನಾಯ ಸೋಲಿಗೆ ಹೊಣೆಗಾರಿಕೆ ಹೊತ್ತುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ ಅವರು, ಹೊಸ ಸರ್ಕಾರ ಬಂದಿದೆ. ಅವರಿಗೆ ಶುಭವಾಗಲಿ. ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಇತ್ತು. ಇದನ್ನ ಕಾಂಗ್ರೆಸ್ ಅವರು ಹಣದಿಂದ ಮತ್ತೊಂದು ಮಗದೊಂದ ವಿಚಾರದಲ್ಲಿ ಕಾಂಗ್ರೆಸ್ ಗೆದ್ದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ನಮ್ಮಲ್ಲಿ ದೊಡ್ಡ ಮಟ್ಟದಲ್ಲಿ ಹಣ ಇಲ್ಲ. ನಮಗೆ ಯಾರ ಬೆಂಬಲವೂ ಇರಲಿಲ್ಲ. ಆದರು ನಾವು 60 ಲಕ್ಷ ಮತ ಪಡೆದಿದ್ದೇವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯ್ತಿ ಹಾಗೂ ಲೋಕಸಭೆ ಚುನಾವಣೆಗೆ ನಾವು ಸಿದ್ದವಾಗಿ ಕೆಲಸ ಮಾಡ್ತೀವಿ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಳ್ಳೆಯದಾಗಲಿ. ಈ ಮೊದಲು ಚುನಾವಣೆ ವೇಳೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿ. ಮೂರು ತಿಂಗಳು ಅವರಿಗೆ ಸಮಯ ಕೊಡ್ತೀವಿ. ಅವರಿಗೆ ಈ 3 ತಿಂಗಳು ಹನಿಮೂನ್ ಸಮಯವಾಗಿದೆ. ಜನರಿಗೆ ಕೊಟ್ಟ ಭರವಸೆ ಕಾಂಗ್ರೆಸ್ ಅವರು ಈಡೇರಿಸಲಿ. ಜೆಡಿಎಸ್ ನಲ್ಲಿ ಇಬ್ರಾಹಿಂ ಪಾತ್ರ ಏನು ಎಂಬ ಪ್ರಶ್ನೆ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸದಾ ಜನರ ಮಧ್ಯೆ ಇರೋನು. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ ಎಂದು ತಿಳಿಸಿದರು.
ನೀವು ಕಾಂಗ್ರೆಸ್‌ನಲ್ಲಿ ಇದ್ದಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂದು ಮಾಧ್ಯಮಗಳಿಂದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗೌರವ ಇಲ್ಲದ ಕಡೆ ನಾನು ಇರೊಲ್ಲ. ಅಂತಹ ಸ್ಥಾನಕ್ಕೆ ನಾನು ಹೋಗಿಲ್ಲ. ಮಾನಕ್ಕಾಗಿ ಹಾಗೂ ಮರ್ಯಾದೆಗಾಗಿಯೇ ನಾನು ಪಕ್ಷವನ್ನು ಬಿಟ್ಟು ಬಂದೆ. ನನಗೆ ಯಾವುದೇ ಅಧಿಕಾರದ ಆಸೆ ಇಲ್ಲವೆಂದು ತಿಳಿಸಿದರು.