ಚಲಿಸುತ್ತಿರುವ ಬಸ್ಸಿಗೆ ಕಿಟಕಿಯಿಂದ ಒಳಗೆ ಹೋಗಿ ಕುಳಿತ ಹುಡುಗಿ; ವಿಡಿಯೋ ವೈರಲ್!
ಇಲ್ಲೊಬ್ಬಳು ಹುಡುಗಿ ಬಸ್ ಸಾಗುತ್ತಿರುವಾಗಲೇ ಓಡಿ ಹೋಗಿ ಕಿಟಕಿಯಿಂದ ಬಸ್‌ನೊಳಗೆ ಪ್ರವೇಶಿಸಿದ್ದಾಳೆ. ಈ ದೃಶ್ಯವನ್ನು ನೋಡುವಾಗಲೇ ಎದೆ ಧಗ್ ಎಂದಂತಾಗುತ್ತದೆ. ghantaa ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ತುಂಬಿರುವ ಬಸ್ ನಿಧಾನಕ್ಕೆ ಮುಂದಕ್ಕೆ ಸಾಗುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹಿಂಬಾಗಿಲಿನಲ್ಲಿ ಸಾಕಷ್ಟು ಮಂದಿ ನೇತಾಡುತ್ತಿರುತ್ತಾರೆ. ಕೆಲವರು ಬಸ್ ಏರಲಾಗದೆ ತಮ್ಮ ಪ್ರಯತ್ನವನ್ನು ಅರ್ಧಕ್ಕೇ ಬಿಡುತ್ತಾರೆ.
ಆದರೆ, ಒಬ್ಬಳು ಹುಡುಗಿ ಮಾತ್ರ ಬಸ್‌ನ ಕಿಟಕಿಯ ಬಳಿ ಓಡಿ ಅಲ್ಲಿಂದ ಬಸ್ ಏರಲು ಪ್ರಯತ್ನಿಸುತ್ತಾಳೆ. ಆಗ ಒಳಗಿದ್ದವರು ಕಿಟಕಿಯಲ್ಲಿ ನೇತಾಡುತ್ತಿದ್ದ ಆಕೆಯ ಸಹಾಯಕ್ಕೆ ಬರುತ್ತಾರೆ. ಹೀಗೆ ಬಸ್ ನಿಧಾನಕ್ಕೆ ಸಾಗುತ್ತಿರುವಾಗಲೇ ಈ ಹುಡುಗಿ ಕಿಟಕಿ ಮೂಲಕ ಬಸ್‌ನೊಳಗೆ ಹೋಗುವುದನ್ನು ನೋಡಬಹುದಾಗಿದೆ. ಇದನ್ನು ಅಲ್ಲಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ನಿಂತಿರುವುದು ಕೂಡಾ ಈ ಕ್ಲಿಪ್‌ನಲ್ಲಿ ಕಾಣುತ್ತದೆ.
ಇದು ಈಗಿನ ವಿಡಿಯೋ ಅಲ್ಲ. ಆದರೆ, ಈ ಹಳೆಯ ವಿಡಿಯೋ ಈಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿದೆ ಮತ್ತು ಈ ವಿಡಿಯೋ ಮತ್ತೆ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ದೃಶ್ಯ ಕಂಡ ಬಹುತೇಕರು ಅಚ್ಚರಿ, ಆಘಾತ ವ್ಯಕ್ತಪಡಿಸಿದ್ದಾರೆ.