ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ : ನಟ ಚೇತನ್
ಹಲವು ವರ್ಷಗಳಿಂದ ಗಾಂಜಾ (Ganja) ಕುರಿತಾಗಿ ಹತ್ತಾರು ಹೇಳಿಕೆಗಳು ಬರುತ್ತಿವೆ. ಈ ಹಿಂದೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟ ರಾಕೇಶ್ ಅಡಿಗ (Rakesh Adiga) ಕೂಡ ಗಾಂಜಾವನ್ನು ಕಾನೂನುಬದ್ಧಗೊಳಿಸಿ ಎಂದು ಹೇಳಿಕೆ ನೀಡಿದ್ದರು. ಅದು ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು. ಡ್ರಗ್ಸ್ ವಿಚಾರವಾಗಿ ಸ್ಯಾಂಡಲ್ ವುಡ್ ಸುದ್ದಿಯಲ್ಲಿದ್ದಾಗ ಗಾಂಜಾ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ಮತ್ತೆ ಚೇತನ್ (Chetan Ahimsa) ಆ ಕುರಿತು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಹಿಮಾಚಲ (Himachal) ಮುಖ್ಯಮಂತ್ರಿ ಸುಖವಿಂದರ್ ಸುಖು ಗಾಂಜಾ ವಿಚಾರವಾಗಿ ಮಾತನಾಡಿದ್ದನ್ನು ಅನುಮೋದಿಸಿರುವ ಚೇತನ್, ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು ಎಂದಿದ್ದಾರೆ. ಸುಖವಿಂದರ್ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಲು ಯೋಜಿಸಿರುವುದನ್ನು ಚೇತನ್ ಬೆಂಬಲಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ‘ಗಾಂಜಾ ಕೃಷಿಯು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ರೋಗಿಗಳಿಗೆ ಔಷಧೀಯ ಪ್ರಯೋಜನಗಳನ್ನು ಹೇಗೆ ಒದಗಿಸುತ್ತದೆ ಎಂಬುದನ್ನು 5 ಸದಸ್ಯ ಸಮಿತಿಯೊಂದು ಅಧ್ಯಯನ ಮಾಡುತ್ತದೆ. ಉತ್ತರಾಖಂಡ, ಗುಜರಾತ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕವೂ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸುವತ್ತ ಗಮನಹರಿಸಬೇಕು’ ಎಂದಿದ್ದಾರೆ.
ಹಿಮಾಚಲದ ಮುಖ್ಯಮಂತ್ರಿಯ ನಡೆಯು ಒಳ್ಳೆಯದು ಎಂದು ಚೇತನ್ ಪ್ರಶಂಸೆ ಮಾಡಿದ್ದಾರೆ. ಕರ್ನಾಟಕವೂ ಇದರತ್ತ ಗಮನ ಹರಿಸಬೇಕು ಎಂದಿದ್ದಾರೆ. ಇದು ರಾಜ್ಯದ ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಎನ್ನುವ ಕುರಿತು ಅಧ್ಯಯನವಾಗಲಿ ಎಂದು ಅವರು ಬರೆದುಕೊಂಡಿದ್ದಾರೆ.