ಕ್ಲಿನಿಕ್ನಲ್ಲಿ ಡಾಕ್ಟರ್, ನರ್ಸ್ ಲವ್ ಸ್ಟೋರಿ ಶುರು – ಮದ್ವೆಯಾಗಿ ಮಗುವಾದ ನಂತರ ಕಿರುಕುಳ ಆರೋಪ
ಧಾರವಾಡ: ಕ್ಲಿನಿಕ್ನಲ್ಲಿ (Clinic) ಕೆಲಸ ಮಾಡುತ್ತಿದ್ದ ವೈದ್ಯ (Doctor) ಹಾಗೂ ನರ್ಸ್ (Nurse) ನಡುವೆ ಪ್ರೀತಿಯಾಗಿ, ಎರಡು ಕುಟುಂಬಗಳನ್ನು ಒಪ್ಪಿಸಿ ಮದುವೆಯಾಗಿ ಒಂದು ಮುದ್ದಾದ ಮಗುವಾದ ನಂತರ ಜಾತಿ ನಿಂದನೆ ಹಾಗೂ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಇದೀಗ ನರ್ಸ್ ಪೊಲೀಸ್ (Police) ಠಾಣೆ ಮೆಟ್ಟಿಲೇರಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲು ಗ್ರಾಮದಲ್ಲಿ ನಡೆದಿದೆ.
ಹಲವಾಗಲು ಗ್ರಾಮದವರಾದ ಗಿರೀಶ್ ವೈದ್ಯರಾಗಿದ್ದು, ನರ್ಸ್ ತ್ರಿವೇಣಿ, ಗಿರೀಶ್ ನಡೆಸುತ್ತಿದ್ದ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ಆ ಬಳಿಕ ಮನೆಯವರನ್ನು ಒಪ್ಪಿಸಿ ಇಬ್ಬರು ಮದುವೆಯಾಗಿದ್ದರು. ಇಬ್ಬರು ಕೂಡ ಕೆಲ ವರ್ಷಗಳ ಕಾಲ ಸುಖವಾಗಿ ಸಂಸಾರ ಮಾಡಿದ್ದಾರೆ. ಇವರ ಸಂಸಾರ ಮಗು ಆಗೋವರೆಗೋ ಬಹಳ ಚೆನ್ನಾಗಿಯೇ ಇತ್ತು ಆದರೆ ಈಗ ಅವರ ಬಾಳಲ್ಲಿ ಜಾತಿ ಮತ್ತು ವರದಕ್ಷಿಣೆ ಎಂಬ ಭೂತ ಎಂಟ್ರಿಯಾಗಿದೆ. ಗಂಡ ಹಾಗೂ ಅವರ ಮನೆಯವರು ಕಿರುಕುಳ ನೀಡಿ ಹೊರ ಹಾಕಿದ್ದಾರೆ ಎಂದು ತ್ರಿವೇಣಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಗಿರೀಶ್ ಹಾಗೂ ತ್ರಿವೇಣಿ ಅಂತರ್ಜಾತಿ ಮದುವೆಯಾಗಿದ್ರು, ಆದ್ರೆ ಈಗ ಯಾಕೋ ಇಬ್ಬರ ಜೀವನ ಸರಿಹೊಂದುತ್ತಿಲ್ಲವಂತೆ, ಹೀಗಾಗಿ ಜಾತಿ ಭೂತ ಮತ್ತು ವರದಕ್ಷಿಣೆ ಎರಡು ಎಂಟ್ರಿಯಾಗಿ ಇವರ ಬಾಳಲ್ಲಿ ಬಿರುಗಾಳಿಯೇ ಎದ್ದಿದೆ. ನನಗೆ ಕಿರುಕುಳ ನೀಡುತ್ತಿದ್ದಾರೆ ಅಂತ ಆರೋಪಿಸಿ ತ್ರಿವೇಣಿ, ಹಲವಾಗಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ, ಎರಡ್ಮೂರು ಬಾರಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದ್ರೆ ಅಲ್ಲಿ ಕೇಸ್ ದಾಖಲಾಗದ ಕಾರಣ, ವಿಜಯನಗರ ಎಸ್ಪಿ ಹರಿಬಾಬು ಅವರಿಗೆ ಬಂದು ದೂರು ನೀಡಿದ್ದಾರೆ. ಕೂಡಲೇ ಹಲವಾಗಲು ಪಿಎಸ್ಐಗೆ ಸೂಚನೆ ನೀಡಿದ ಎಸ್ಪಿ ಹರಿಬಾಬು FIR ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಗಿರೀಶ್ ಸೇರಿದಂತೆ ಕುಟುಂಬಸ್ಥರು ಸದ್ಯ ನಾಪತ್ತೆಯಾಗಿದ್ದಾರೆ.