ಕ್ರಿಕೆಟ್ ಪಂದ್ಯಾಟದ ವೇಳೆ ಜಗಳ- ಇಬ್ಬರ ದಾರುಣ ಅಂತ್ಯ!
ಚಿಕ್ಕಬಳ್ಳಾಪುರ: ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಯೊಬ್ಬರು ಆಯೋಜನೆ ಮಾಡಿದ್ದ ಕ್ರಿಕೆಟ್ ಟೂರ್ನಿ ವೇಳೆ ಕಿರಿಕ್ ನಡೆದು ಇಬ್ಬರ ಹತ್ಯೆಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದ್ದು, ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರ ಹತ್ಯೆಯನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.
ಮೃತರನ್ನು ಭರತ್ ಹಾಗೂ ಪ್ರತಿಕ್ ಎಂದು ಗುರುತಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿತ ಧೀರಜ್ ಮುನಿರಾಜು ಯುವಕರಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದರು. ಬೆಳಗ್ಗೆಯಿಂದ ಕ್ರಿಕೆಟ್ ಪಂದ್ಯಾವಳಿಗಳು ಸುಸೂತ್ರವಾಗಿ ನಡೆಯುತ್ತಿದ್ದು, ಮಟ ಮಟ ಮಧ್ಯಾಹ್ನದ ವೇಳೆ ಕ್ರಿಕೆಟ್ ಗ್ರೌಂಡ್ಗೆ ಸ್ವಿಫ್ಟ್ ಕಾರಲ್ಲಿ ಬಂದಿದ್ದ ಹುಲಿಕುಂಟೆ ಗ್ರಾಮದ ಕೆಲ ಯುವಕರು ಕಿರಿಕ್ ಮಾಡಿಕೊಂಡಿದ್ದಾರೆ.
ಕ್ರಿಕೆಟ್ (Cricket) ಆಡುವಾಗ ಗ್ರೌಂಡ್ ಒಳಗೆ ಯಾಕೆ ಕಾರು ತಂದ್ರಿ ಎಂದು ಆಯೋಜಕರು, ಕ್ರಿಕೆಟ್ ಆಡುತ್ತಿದ್ದ ಯುವಕರು ಪ್ರಶ್ನಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಬಂದ ಯುವಕರಿಗೂ ಹಾಗೂ ಆಯೋಜಕರಿಗೂ ಗಲಾಟೆ ನಡೆದು ಕಾರಿನ ಗಾಜು ಜಖಂ ಮಾಡಿದ್ದಾರೆ. ಕ್ರಿಕೆಟ್ ಗ್ರೌಂಡ್ನಲ್ಲಿ ಕಾರು ಬಂದ ಕಾರಣಕ್ಕೆ ಆರಂಭವಾದ ಕಿರಿಕ್ ನಂತರ ಪೊಲೀಸ್ ಠಾಣೆಗೆ ಹೋಗಿದೆ. ಅದಾದ ಬಳಿಕ ಯುವಕರು ದೊಡ್ಡಬೆಳವಂಗಲ ಬಸ್ ನಿಲ್ದಾಣದತ್ತ ಬಂದಿದ್ದಾರೆ. ಈ ವೇಳೆ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದ ಯುವಕರನ್ನು ಅವರು ಟಾರ್ಗೆಟ್ ಮಾಡಿ ಅಟ್ಯಾಕ್ ಮಾಡಿದ್ದಾರೆ.
ಸ್ವಿಫ್ಟ್ ಕಾರಲ್ಲಿ ಬಂದವರು ಪೆಪ್ಪರ್ ಸ್ಪ್ರೈ ಮಾಡಿ ಸಿಕ್ಕ ಸಿಕ್ಕವವರಿಗೆ ಚಾಕು ಮೂಲಕ ಇರಿದಿದ್ದು, ಘಟನೆಯಲ್ಲಿ ಭರತ್ ಮರ್ಮಾಂಗಕ್ಕೆ ಇರಿದಿದ್ರೇ ಹಾಗೂ ಪ್ರತೀಕ್ಗೆ ಎದೆಭಾಗಕ್ಕೆ ಇರಿದಿದ್ದಾರೆ. ಈ ವೇಳೆ ಭರತ್ ಹಾಗೂ ಪ್ರತಿಕ್ ಗಂಭೀರ ಗಾಯಗೊಂಡಿದ್ದು, ಅವರನ್ನು ದೊಡ್ಡಬಳ್ಳಾಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ದ್ಯ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ದೊಡ್ಡಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಗುವಿನ ವಾತವಾರಣ ಮನೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಇಬ್ಬರ ಮೃತದೇಹಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕೊಲೆ ಮಾಡಿದ ಯುವಕರು ತಾವು ಬಂದಿದ್ದ ಅದೇ ಸ್ವಿಫ್ಟ್ ಕಾರಿನಲ್ಲಿ ಎಸ್ಕೇಪ್ ಆಗಿದ್ದು, ಆರೋಪಿಗಳು ಯಾರು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ