ಕೊಡಗು: ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ..!

ಕೊಡಗು(ಏ.07): ಮಡಿಕೇರಿ ಅಂದ್ರೆ ವರ್ಷದ ಆರೇಳು ತಿಂಗಳ ಕಾಲ ಮಳೆ ಸುರಿಯುತ್ತದೆ. ಆದರೀಗ ಬೇಸಿಗೆ ಕಾವು ಮಿತಿ ಮೀರಿದ್ದರೆ, ಇದೇ ವೇಳೆ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದ್ದು, ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಕಾವು ಕೂಡ ಏರುತ್ತಿದೆ. ಈ ಎರಡು ಕಾವುಗಳ ನಡುವೆ ಮಡಿಕೇರಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ. ಕುಡಿಯುವ ನೀರಿನ ಮೂಲಗಳಲ್ಲಿ ಎರಡು ಮೂಲಗಳು ಸಂಪೂರ್ಣ ಭತ್ತಿಹೋಗಿದ್ದು ದಿನಬಿಟ್ಟು ದಿನ ಅಂದರೆ ವಾರದಲ್ಲಿ ಮೂರು ದಿನಗಳು ಮಾತ್ರವೇ ಕುಡಿಯುವ ನೀರನ್ನು ಒದಗಿಸಲಾಗುವುದು. ಇದಕ್ಕೆ ನಗರದ ಜನತೆ ಸಹಕರಿಸಬೇಕು ಎಂದು ಸ್ವತಃ ನಗರಸಭೆ ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆ ನಗರದ ಜನತೆ ಬಿರುಬಿಸಿಲಿನಲ್ಲೂ ಬೆವರುವಂತೆ ಮಾಡಿದೆ. ನಗರಸಭೆ ಪೂರೈಸುವ ಈ ನೀರೇ ಮಡಿಕೇರಿ ನಗರದ ಜನತೆಗೆ ಕುಡಿಯುವ ಉದ್ದೇಶ ಸೇರಿದಂತೆ ಗೃಹ ಬಳಕೆಯ ಎಲ್ಲಾ ಅಗತ್ಯಗಳಿಗೂ ಆಧಾರ. ಬೆಟ್ಟಗುಡ್ಡಗಳಿಂದ ಕೂಡಿರುವ ಮಡಿಕೇರಿ ನಗರದಲ್ಲಿ 23 ವಾರ್ಡುಗಳಲ್ಲಿ 33 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. 11 ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು, ಇವುಗಳಲ್ಲಿ ಬಹುತೇಕ ಕುಟುಂಬಗಳಿಗೆ ಸ್ವಂತ ನೀರಿನ ಮೂಲಗಳಿಲ್ಲ. ಆದರೀಗ ವಾರದಲ್ಲಿ ಮೂರು ದಿನ ನೀರು ಪೂರೈಸುತ್ತೇವೆ ಎಂದು ಹೇಳಿರುವುದು ಬಹುತೇಕ ಕುಟುಂಬಗಳಿಗೆ ಚಿಂತೆಗೀಡು ಮಾಡಿದೆ. ಇದುವರೆಗೆ ಕೂಟು ಹೊಳೆ, ಕುಂಡಾಮೇಸ್ತ್ರಿ, ರೋಷಾನರ ಹಾಗೂ ಕನ್ನಂಡಬಾಣೆಗಳಿಂದ ನೀರು ಪೂರೈಸಲಾಗುತಿತ್ತು. ಈಗ ರೋಷಾನರ ಮತ್ತು ಕೂಟು ಹೊಳೆಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ.
ಹೀಗಾಗಿ ಉಳಿದ ಎರಡು ಕಡೆಗಳಿಂದ ಮಾತ್ರವೇ ನೀರು ಒದಗಿಸಲು ಅವಕಾಶ ಇರುವುದರಿಂದ ನಗರದ 23 ವರ್ಷಗಳಿಗೆ ನಿತ್ಯ ನೀರು ಪೂರೈಸಲು ಸಾಧ್ಯವಾಗುವುದಿಲ್ಲ. ಜನರು ಅನಗತ್ಯವಾಗಿ ನೀರು ದುರ್ಬಳಕೆ ಮಾಡಬೇಡಿ, ಕಟ್ಟಡ ನಿರ್ಮಾಣ, ಗಿಡಗಳಿಗೆ ನೀರು ಎತೇಚ್ಚವಾಗಿ ನೀರು ಬಳಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದೆ.
ಸದ್ಯ ಕುಂಡಾಮೇಸ್ತ್ರಿ ಯೋಜನೆಯಿಂದ ನೀರನ್ನು ಕೂಟು ಹೊಳೆಗೆ ಲಿಫ್ಟ್ ಮಾಡಿ ಅಲ್ಲಿಂದ ನೀರು ಒದಿಸುತಿದ್ದೇವೆ. ಕುಂಡಾಮೇಸ್ತ್ರಿಯಲ್ಲಿರುವ ನೀರನ್ನು ಇನ್ನು ಒಂದು ತಿಂಗಳ ವರೆಗೆ ಬಳಸಬೇಕೆಂದರೆ ಒಂದು ದಿನ ಬಿಟ್ಟು ಒಂದು ದಿನ ನೀರು ಪೂರೈಸುವುದು ಅನಿವಾರ್ಯ ಎಂದು ನಗರಸಭೆ ಆಯುಕ್ತ ವಿಜಯ್ ಹೇಳಿದ್ದಾರೆ.
ವಿಪರ್ಯಾಸವೆಂದರೆ ಕುಂಡಾಮೇಸ್ತ್ರಿ ಯೋಜನೆಯ ಮೂಲಕ ನಗರಕ್ಕೆ ದಿನದ 24 ಗಂಟೆಯೂ ನೀರು ಒದಗಿಸಬೇಕು ಎನ್ನುವುದು ನಗರದ ಜನತೆಯ ಹಲವು ದಶಕಗಳ ಬೇಡಿಕೆ. ಆ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಜನಪ್ರತಿನಿಧಿಗಳು ಕೋಟ್ಯಂತರ ರೂಪಾಯಿ ವ್ಯಯಿಸಿ ಚೆಕ್ ಡ್ಯಾಂ ನಿರ್ಮಿಸಿದ್ದಾರೆ. ಆದರೆ ಅದಷ್ಟು ಮಾಡಿರುವುದು ಬಿಟ್ಟರೆ ಪೈಪ್ ಲೈನ್ ಮಾಡುವುದಾಗಲಿ, ಮೀಟರ್ ಅಳವಡಿಸುವುದು ಸೇರಿದಂತೆ ಬೇರೆ ಯಾವ ಕೆಲಸಗಳು ಆಗಿಲ್ಲ. ಹೀಗಾಗಿ ಆ ಯೋಜನೆ ಇಂದಿಗೂ ಜನರಿಗೆ ಉಪಯೋಗಕ್ಕೆ ಬಾರದೆ ಕನಸ್ಸಾಗಿಯೇ ಉಳಿದಿದೆ. ದಿನ ಬಿಟ್ಟು ನೀರು ಪೂರೈಸುತ್ತೇವೆ ಸಹಕರಿಸಿ ಎನ್ನುವ ನಗರಸಭೆಯ ಮನವಿಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ದಿನ ಒಂದು ಗಂಟೆ ಮಾತ್ರವೇ ಅವರು ನೀರು ಪೂರೈಸುವುದು. ಅದು ಕೂಡ ವಾರದಲ್ಲಿ ಮೂರು ದಿನ ಎಂದರೆ ಹೇಗೆ. ಸಾಮಾನ್ಯ ಜನರು ಮೂರರಿಂದ ನಾಲ್ಕು ಸಾವಿರ ಕೊಟ್ಟು ಒಂದು ಟ್ಯಾಂಕ್ ಖರೀದಿಸಿ ಬದುಕಲು ಸಾಧ್ಯವೇ ಎಂದು ವಕೀಲ ಹಾಗೂ ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ವಪನ್ ಪೆಮ್ಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.