ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!
ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ(Electronic City) ಪಿಇಎಸ್ ಕಾಲೇಜಿನಲ್ಲಿ ನಡೆದಿದೆ. 5ನೇ ಮಹಡಿಯಿಂದ ಹಾರಿ ಕರಸಾಲ ರಾಹುಲ್(21) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂಲತಃ ಆಂಧ್ರಪ್ರದೇಶದ ಕರ್ನೂಲಿನ ಕುಟುಂಬ, ಕೆಲ ವರ್ಷಗಳಿಂದ ಬಳ್ಳಾರಿಯಲ್ಲಿ ನೆಲೆಸಿದ್ದರು. ಇನ್ನು ಮೃತ ವಿದ್ಯಾರ್ಥಿ ರಾಹುಲ್, ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ(ಮೇ.14) ಪರೀಕ್ಷೆಗೆ ರಾಹುಲ್ ತಡವಾಗಿ ಬಂದಿದ್ದ, ಈ ವಿಚಾರವಾಗಿ ಕಾಲೇಜಿನಲ್ಲಿ ರಾಹುಲ್ನನ್ನು ನಿಂದಿಸಿರುವ ಅನುಮಾನ ಇದ್ದು, ಇದರಿಂದಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದು, ಘಟನಾ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ಸಾವು..!
ಕಳೆದ ಮೂರು ತಿಂಗಳಿಂದ ವಿಪರೀತ ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಜನರಿಗೆ ವರುಣ ಕೃಪೆ ತೋರಿದ್ದು, ಕಳೆದ ಒಂದು ವಾರದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ರಾಜ್ಯದ ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಅನಾಹುತಗಳು ಕೂಡ ಸಂಭವಿಸಿದೆ
ಉಡುಪಿಯಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ. ಸುರೇಶ್ ಶೆಟ್ಟಿ (38) ಸಿಡಿಲು ಬಡಿದು ಮೃತ ಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿತ್ತು. ಸುರೇಶ್ ಶೆಟ್ಟಿ ಮಳೆ ಬರುವ ವೇಳೆ ಮನೆಯ ಪಕ್ಕ ನಿಂತಿದ್ದರು. ಈ ವೇಳೆ ಏಕಾಏಕಿ ಸಿಡಿಲು ಬಡಿದಿದ್ದು, ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.