ಕಾರ್ಗಿಲ್ ಯುದ್ಧದಲ್ಲಿ ಸ್ಫೋಟಗೊಳ್ಳದ ಬಾಂಬ್ 24 ವರ್ಷದ ಬಳಿಕ ಬ್ಲ್ಯಾಸ್ಟ್, ಬಾಲಕ ಸಾವು
ಪಾಶ್ಕುಮ್ನ (Pashkum) ಖಾರ್ಜಾಂಗ್ನ (Kharzong) ನಿವಾಸಿಗಳಾದ ಅಲಿ ನಕಿ, ಮುಂತಜೀರ್ ಮೆಹದಿ ಮತ್ತು ಬಾಕಿರ್ ಎಂಬ ಮೂರು ಬಾಲಕರು ಫುಟ್ಬಾಲ್ ಮೈದಾನಕ್ಕೆ ಹೋಗುತ್ತಿದ್ದರು. ಆ ವೇಳೆ ಓರ್ವ ಬಾಲಕ ಬಾಂಬ್ ಮೇಲೆ ಎಡವಿ ಬಿದ್ದಿದ್ದಾನೆ. ಪರಿಣಾಮ ಬಾಂಬ್ ಸ್ಪೋಟಗೊಂಡು (Bomb explosion) ಬಾಕಿರ್ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಶ್ಕುಮ್ನ ಕೌನ್ಸಿಲರ್ (Councillor) ಕಚೋ ಮೊಹಮ್ಮದ್ ಫಿರೋಜ್ ಹೇಳಿದ್ದಾರೆ.
ಗಾಯಗೊಂಡಿರುವ ಮಕ್ಕಳಲ್ಲಿ ಒಬ್ಬ ಅಪಾಯದಿಂದ ಪಾರಾಗಿದ್ದು, ಇನ್ನೊಬ್ಬ ಬದುಕುಳಿಯುವ ಸಾಧ್ಯತೆ ಇದೆ. ಮೃತನ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಹಾಗೂ ಕಾರ್ಗಿಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮದ್ದುಗುಂಡುಗಳನ್ನು ಶೀಘ್ರದಲ್ಲಿ ಬೇರೆಡೆ ಸ್ಥಳಾಂತರಿಸುತ್ತೇವೆ ಎಂದು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಬಿ.ಡಿ ಮಿಶ್ರಾ ಹೇಳಿದ್ದಾರೆ.
ಈ ಘಟನೆಯು ಜನರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮೈದಾನಗಳಲ್ಲಿ ಆಡುವ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಮೂಡುತ್ತಿದೆ. ಸ್ಫೋಟಗೊಳ್ಳದ ಬಾಂಬ್ಗಳನ್ನು ತೆರವುಗೊಳಿಸಲು ಮತ್ತು ನಿವಾಸಿಗಳ ಸುರಕ್ಷತೆಗಾಗಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.