ಕಾಂಗ್ರೆಸ್ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ
ಯಾದಗಿರಿ, ಜುಲೈ 23: ಸಿಎಂ ಸಿದ್ದರಾಮಯ್ಯ ಆಪ್ತರಾಗಿದ್ದ ಕಾಂಗ್ರೆಸ್ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ (Marigowda Hulkal) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಹುಲ್ಕಲ್ ಗ್ರಾಮದ ನಿವಾಸಿ. ಕುರುಬ ಸಮುದಾಯದ ಪ್ರಭಾವಿ ಮುಂಖಡರಾಗಿದ್ದರು. ಅವರ ನಿಧನದಿಂದ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಕಲಬುರಗಿ ತೊಗರಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಆದರೆ ತೊಗರಿ ನಿಗಮ ಅಧ್ಯಕ್ಷ ಸ್ಥಾನ ನಿರಾಕರಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಗೂ ಆಪ್ತರಾಗಿದ್ದರು. ಮರಿಗೌಡ ಪಾಟೀಲ್ ಹುಲ್ಕಲ್ ಹಿಂದೆ ಕುರಿ ಉಣ್ಣೆ ನಿಗಮ ಹಾಗೂ ಭೀಮರಾಯನಗುಡಿ ಕೃಷ್ಣ ಕಾಡಾ ಅಧ್ಯಕ್ಷರಾಗಿದ್ದರು.
ಮರಿಗೌಡ ಪಾಟೀಲ್ ಹುಲ್ಕಲ್ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದು, ನನ್ನ ಅತ್ಯಂತ ಆತ್ಮೀಯರು, ಕರ್ನಾಟಕ ರಾಜ್ಯ ಕುರಿ-ಉಣ್ಣೆ ನಿಗಮ ಹಾಗೂ ಕೃಷ್ಣಾ ಕಾಡಾ ನಿಗಮಗಳ ಮಾಜಿ ಅಧ್ಯಕ್ಷರೂ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಮರಿಗೌಡ ಹುಲಕಲ್ ಅವರ ಹಠಾತ್ ನಿಧನ ನಿಜಕ್ಕೂ ಆಘಾತ ತಂದಿದೆ.
ಅವರ ನಿಧನದ ನೋವನ್ನು ತಡೆಯುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲೆಂದು ಪ್ರಾರ್ಥಿಸುವೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕ, ಮಾಜಿ ಶಾಸಕ ಡಾ.ವೀರ ಬಸವಂತರೆಡ್ಡಿ ಮುದ್ನಾಳ್ ನಿಧನ:
ಯಾದಗಿರಿ: ಮಾಜಿ ಶಾಸಕ ಹಾಗೂ ಹಿರಿಯ ವೈದ್ಯ ಡಾ.ವೀರಬಸವಂತರೆಡ್ಡಿ ಮುದ್ನಾಳ್ (76) ಅನಾರೋಗ್ಯದಿಂದ ಸೋಮವಾರ ನಿಧನರಾದರು.
ಕಳೆದ ಆರು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ವೀರ ಬಸವಂತರೆಡ್ಡಿ ಮುದ್ನಾಳ್ (Dr. Veera Basavantareddy Mudnal) ಅವರು ಇಂದು ಮಧ್ಯಾಹ್ನ ಯಾದಗಿರಿ ನಗರದ ವಿಬಿಆರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
2004ರಲ್ಲಿ ಯಾದಗಿರಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾಯಿತರಾಗಿದ್ದರು. 2010 ರಲ್ಲಿ ಡಾ.ವೀರಬಸವಂತರೆಡ್ಡಿ ಮುದ್ನಾಳ್ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಯಾದಗಿರಿ ಜಿಲ್ಲೆ ರಚನೆಯಲ್ಲಿ ಡಾ.ವೀರ ಬಸವಂತ್ ರೆಡ್ಡಿ ಮುದ್ನಾಳ್ ಮಹತ್ವದ ಪಾತ್ರ ವಹಿಸಿದ್ದರು. ಅವರ ನಿಧನ ಯಾದಗಿರಿಯ ಜನತೆಯಲ್ಲಿ ಅಪಾರ ದುಃಖವನ್ನುಂಟು ಮಾಡಿದೆ.
ಬಿಜೆಪಿಯ ಹಿರಿಯ ನಾಯಕರಾದ ಡಾ.ವೀರ ಬಸವಂತರೆಡ್ಡಿ ಮುದ್ನಾಳ್ ಅವರು ಪಕ್ಷದೊಳಗೆ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಅವರು ಪತ್ನಿ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಮತ್ತು ನಾಲ್ವರು ಸಹೋದರರನ್ನು ಅಗಲಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ರೆಡ್ಡಿ ಸೋಮವಾರ ಮಧ್ಯಾಹ್ನ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮಂಗಳವಾರ ಸಕಲಾ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಿತ್ತು. ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.