ಕಾಂಗ್ರೆಸ್ ಸರ್ಕಾರಕ್ಕೆ 18 ಸಲಹೆಗಳನ್ನ ಕೊಟ್ಟ ಶಿಕ್ಷಣ ತಜ್ಞ ಪ್ರೊ ಎಂಆರ್ ದೊರೆಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶಾಲಾ ಪಠ್ಯ ಪರಿಷ್ಕರಣೆಗೆ ಮುಂದಾಗಿದೆ. ಇದಕ್ಕೆ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ತಾತ್ಕಾಲಿಕ ಸಮಿತಿ ರಚನೆ ಕೂಡ ಮಾಡಲಾಗಿದೆ. ಇವೆಲ್ಲದರ ಮಧ್ಯೆ ಶಿಕ್ಷಣ ತಜ್ಞ ಪ್ರೊ. ಎಂ.ಆರ್ ದೊರೆಸ್ವಾಮಿ ಅವರು ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ. ಶಾಲಾ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ವಿಚಾರ ಬಗ್ಗೆ ಚರ್ಚೆ ಮಾಡಲಾಗಿದೆ.
ಸಿಎಂ ಭೇಟಿ ಬಳಿಕ ಶಿಕ್ಷಣ ತಜ್ಞ ದೊರೆಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಮ್ಮ ಎರುಡೂವರೆ ವರ್ಷಗಳ ಕಾರ್ಯಕ್ರಮಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಮುಖ್ಯವಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಸರ್ಕಾರಕ್ಕೆ 18 ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿದರು.
ಇದಲ್ಲದೇ 35 ವಿಶ್ವವಿದ್ಯಾಲಯಗಳು ತಲಾ 10 ಶಾಲೆಗಳ ಅಭಿವೃದ್ಧಿಯ ಹೊಣೆ ಹೊತ್ತಿದ್ದೇವು. ನಮ್ಮ 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ 30 ಸಾವಿರ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಹೀಗಾಗಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಇದಕ್ಕೆ ಮಧ್ಯಂತರ ವರದಿಯಲ್ಲಿ ಪರಿಹಾರವನ್ನೂ ತಿಳಿಸಲಾಗಿದೆ ಎಂದರು.
2020-21ನೇ ಸಾಲಿನ ಬಜೆಟ್ನಲ್ಲಿ ಪ್ರತಿಯೊಬ್ಬ ಶಾಸಕರೂ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಕಾರ್ಯಕ್ರಮವಿತ್ತು. ಅದರಂತೆ ಕೆಲ ಶಾಸಕರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಧ್ಯಂತರ ವರದಿ ಕುರಿತು ಮುಖ್ಯಮಂತ್ರಿಗಳು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ವರದಿಯನ್ನು ಸಂಪೂರ್ಣವಾಗಿ ಓದಿದ ಬಳಿಕ ಮತ್ತೊಮ್ಮೆ ಈ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನಿಡಿದ್ದಾರೆ.