25 ವರ್ಷದ ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ; ಗೆಳೆಯನ ಬಂಧನ!
ತನ್ನ ಗೆಳೆಯನ ಕಿರುಕುಳದಿಂದಾಗಿ ಸೃಷ್ಟಿ ತುಲಿ ತೊಂದರೆಗೀಡಾಗಿದ್ದಳು ಎಂದು ಪ್ರಾಥಮಿಕ ವಿಚಾರಣೆಗಳು ಸೂಚಿಸುತ್ತವೆ. ಆತ ಆಕೆಯನ್ನು ಸಾರ್ವಜನಿಕವಾಗಿ ನಿಂದಿಸುತ್ತಿದ್ದನು ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸದಂತೆ ತಡೆಯುತ್ತಿದ್ದನು ಎಂದು ಆರೋಪಿಸಲಾಗಿದೆ.
ಮುಂಬೈ: 25 ವರ್ಷದ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ ಅವರು ಸೋಮವಾರ ಅಂಧೇರಿಯ ಮರೋಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸೃಷ್ಟಿ ಬಾಯ್ಫ್ರೆಂಡ್, 27 ವರ್ಷದ ಆದಿತ್ಯ ಪಂಡಿತ್‌ನನ್ನು ಪೊವೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸೋಮವಾರ ಬೆಳಗ್ಗೆ ಅಂಧೇರಿ(ಪೂರ್ವ)ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್‌ನ ಹಿಂಭಾಗದ ಬಾಡಿಗೆ ನಿವಾಸದಲ್ಲಿ ತುಲಿ ಶವವಾಗಿ ಪತ್ತೆಯಾಗಿದ್ದಾಳೆ. ತನ್ನ ಬಾಯ್ ಫ್ರೆಂಡ್ ಜೊತೆಗಿನ ಜಗಳದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಆದಿತ್ಯ ಪಂಡಿತ್ ಸೃಷ್ಟಿಯನ್ನು ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗೋರಖ್‌ಪುರ ಮೂಲದ ಸೃಷ್ಟಿ ತುಲಿ ಅವರ ಕುಟುಂಬ ಆರೋಪಿಸಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಆದಿತ್ಯ ಪಂಡಿತ್, ಮಾಂಸಾಹಾರಿ ಆಹಾರವನ್ನು ಸೇವಿಸದಂತೆ ಸೃಷ್ಟಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ. ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಕುಟುಂಬಸ್ಥರು ಮುಂಬೈ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕಮರ್ಷಿಯಲ್ ಪೈಲಟ್ ಲೈಸೆನ್ಸ್‌ಗಾಗಿ ತರಬೇತಿ ಪಡೆಯುತ್ತಿರುವಾಗ ಆದಿತ್ಯ ಮತ್ತು ಸೃಷ್ಟಿ ದೆಹಲಿಯಲ್ಲಿ ಭೇಟಿಯಾಗಿದ್ದರು. ತರಬೇತಿಯ ನಂತರ, ಸೃಷ್ಟಿ ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರಿದರು. ಆದರೆ ಆಗಿತ್ಯ ಪಂಡಿತ್ ಪೈಲಟ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
ಸೋಮವಾರ ಮುಂಜಾನೆ ದೆಹಲಿಗೆ ತೆರಳುತ್ತಿದ್ದ ಪ್ರಿಯಕರ ಆದಿತ್ಯನಿಗೆ ಸೃಷ್ಟಿ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಳು. ಇದನ್ನು ತಿಳಿದ ಆದಿತ್ಯ ತಕ್ಷಣವೇ ಆಕೆ ಇದ್ದ ಫ್ಲ್ಯಾಟ್‌ಗೆ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು. ಈ ವೇಳೆ ನಕಲಿ ಕೀ ತಯಾರಕರನ್ನು ಕರೆಸಿ ಬಾಗಿಲು ತೆಗೆದು ನೋಡಿದಾಗ ಸೃಷ್ಟಿ ಡೇಟಾ ಕೇಬಲ್ ಸಹಾಯದಿಂದ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಸೃಷ್ಟಿ ಉತ್ತರ ಪ್ರದೇಶ ಮೂಲದವಳಾಗಿದ್ದು, ಕಳೆದ ವರ್ಷ ಜೂನ್‌ನಿಂದ ಮುಂಬೈನಲ್ಲಿ ನೆಲೆಸಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿರುವಾಗ ಆದಿತ್ಯನನ್ನು ಭೇಟಿಯಾಗಿದ್ದಳು. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ಬದಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದಿತ್ಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 29ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.