ಏನಿದು ಕಾಗದ ಚೀಲ ದಿನ? ಈ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪ್ಲಾಸ್ಟಿಕ್ ಚೀಲಗಳ ಬದಲಿಗೆ ಪೇಪರ್ ಬ್ಯಾಗ್ಗಳ ಬಳಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 12 ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ. ಪ್ಲಾಸ್ಟಿಕ್ನ ದುಷ್ಪರಿಣಾಮಗಳು ಮತ್ತು ನಮ್ಮ ಪರಿಸರಕ್ಕೆ ಎಷ್ಟು ಹಾನಿಕಾರಕ ಎಂಬುದರ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.
ಪೇಪರ್ ಬ್ಯಾಗ್ ಬಳಸೋಣ, ಪ್ಲಾಸಿಕ್ ತ್ಯಜಿಸೋಣ ಮತ್ತು ಪರಿಸರ ಉಳಿಸೋಣ ಎನ್ನುವುದು ನಮ್ಮೆಲ್ಲರ ಕಾಳಜಿಯಾಗಲಿ. ಏನಿದು ಪೇಪರ್ ಬ್ಯಾಗ್ ದಿನ ಎನ್ನುವುದನ್ನು ಮೊದಲು ತಿಳಿದುಕೊಳ್ಳೋಣ.
ಏನಿದು ಪೇಪರ್ ಬ್ಯಾಗ್ ದಿನ?
ಅಮೆರಿಕದ ಅನ್ವೇಷಕರೊಬ್ಬರು ಮೊದಲ ಬಾರಿಗೆ ಪೇಪರ್ ಬ್ಯಾಗ್ ಮೆಷಿನ್ ಪರಿಚಯಿಸಿದ ದಿನವಿದು. 1859ರ ಜುಲೈ 12ರಂದು ಅಮೆರಿಕದ ವಿಲಿಯಮ್ ಗೋಡಾಲೆ ಎನ್ನುವವರು ಮಡುಚಬಹುದಾದ ಪೇಪರ್ ಬ್ಯಾಗ್ಗಳನ್ನು ಈ ಯಂತ್ರಗಳಿಂದ ತಯಾರಿಸಿದರು. ೧೮೭೧ರಲ್ಲಿ ಮಾರ್ಗರೇಟ ಇ ನೈಟ್ ಎನ್ನುವುವರು ಮತ್ತೊಂದು ಯಂತ್ರ ತಯಾರಿಸಿದರು. ಅದರಲ್ಲಿ ಬ್ಯಾಗ್ನ ಅಡಿಭಾಗವು ಚಪ್ಪಟ್ಟೆಯಾಗಿರುವಂತಹ ವಿನ್ಯಾಸದ ಬ್ಯಾಗ್ಗಳನ್ನು ತಯಾರಿಸಲು ಸಾಧ್ಯವಾಯಿತು. ಇದನ್ನು ಗ್ರೋಸರಿ ಬ್ಯಾಗ್ಗಳ ತಾಯಿ ಎಂದು ಕರೆಯಲಾಗುತ್ತದೆ. ೧೮೮೩ರಲ್ಲಿ ಚಾರ್ಲ್ಸ್ ಸ್ಟಿಲ್ವೆಲ್ ಅವರು ಬಾಟಮ್ ಪೇಪರ್ ಬ್ಯಾಗ್ ತಯಾರಿಸಿದರು. ಈ ಬ್ಯಾಗ್ಗಳನ್ನು ಮಡುಚಲು ಸಾಧ್ಯವಾಗಿತ್ತು. ಉತ್ತರ ಅಮೆರಿಕದ ಸೈಂಟ್ ಪಾಲ್ನಲ್ಲಿ ದಿನಸಿ ವ್ಯಾಪರಿ ವಾಳ್ಟರ್ ಡ್ನೊಬೆರ್ನ್ ಎಂಬವರು ಕಾಗದದ ಚೀಲಗಳಿಗೆ ನಾರಿನ ಹ್ಯಾಂಡಲ್ ಅಥವಾ ಹಿಡಿಯನ್ನು ಸಿದ್ಧಪಡಿಸಿದರು. ಈ ಮೂಲಕ ಕಾಗದದ ಬ್ಯಾಗ್ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಯಿತು. ಈಗಂತೂ ವಿವಿಧ ರೀತಿಯ ಪೇಪರ್ ಬ್ಯಾಗ್ಗಳು ದೊರಕುತ್ತವೆ. ನಾವೇ ಸ್ವತಃ ಪೇಪರ್ ಬ್ಯಾಗ್ ತಯಾರಿಸಲು ಸಾಧ್ಯವಿದೆ.
ಪ್ಲಾಸ್ಟಿಕ್ ಬಳಕೆ ಪ್ರಕೃತಿಗೆ ಎಷ್ಟು ಮಾರಕ ಎಂಬುವುದು ಎಲ್ಲರಿಗೂ ತಿಳಿದಿದೆ. ಹಾಗಿದ್ದರೂ ಕೂಡಾ ಹೆಚ್ಚಿನವರು ಇಂದಿಗೂ ಪ್ಲಾಸ್ಟಿಕ್ ಚೀಲಗಳನ್ನೇ ಬಳಕೆ ಮಾಡುತ್ತಿದ್ದಾರೆ. ಮತ್ತು ಎಲ್ಲೆಂದರಲ್ಲಿ ಅವುಗಳನ್ನು ಎಸೆಯುತ್ತಾರೆ. ಈ ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳು ಮಣ್ಣಿನಲ್ಲಿ ಕರಗಲು ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ ಇದು ಮಣ್ಣಿನ ಮಾಲಿನ್ಯಕ್ಕೂ ಕಾರಣಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ನಿಂದ ಉಂಟಾಗುವ ಮಾಲಿನ್ಯ ಮತ್ತು ನೈಸರ್ಗಿಕ ಪರಿಸರಕ್ಕೆ ಅದು ಉಂಟುಮಾಡುವ ಗಂಭೀರ ಅಪಾಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಪೇಪರ್ ಬ್ಯಾಗ್ ದಿನವನ್ನು (World Paper Bag Day) ಪ್ರತಿ ವರ್ಷ ಜುಲೈ 12 ರಂದು ಆರಿಸಲಾಗುತ್ತದೆ. ಪೇಪರ್ ಬ್ಯಾಗ್ ಗಳನ್ನು ನವೀಕರಿಸಬಹುದಾದ ಕಚ್ಚಾ ವಸ್ತುಗಳಿಂದ ತಯಾರಿಸಲಾಗುತ್ತದೆ, ಹಾಗೂ ಇವುಗಳು ಮರುಬಳಕೆ ಮಾಡಬಹುದಾದ ಮತ್ತು ಜೈವಿಕ ವಿಘಟನೀಯವಾಗಿದೆ. ಹೆಚ್ಚು ಹೆಚ್ಚು ಪರಿಸರ ಸ್ನೇಹಿ ಪೇಪರ್ ಬ್ಯಾಗ್ ಗಳ ಬಳಕೆ ಮಾಡಿದಾಗ ಪ್ಲಾಸ್ಟಿಕ್ ಚೀಲಗಳ ಬಳಕೆಯು ಕಡಿಮೆಯಾಗುತ್ತದೆ. ಮತ್ತು ಇದರಿಂದ ಪರಿಸರಕ್ಕೆ ಆಗುವ ಹಾನಿಯನ್ನು ಕೂಡಾ ತಪ್ಪಿಸಬಹುದು.
ಪೇಪರ್ ಬ್ಯಾಗ್ ದಿನದ ಮಹತ್ವ
ಪರಿಸರಕ್ಕೆ ಪ್ಲಾಸ್ಲಿಕ್ನಿಂದ ಆಗುವ ಹಾನಿಯ ಕುರಿತು ಎಲ್ಲರಿಗೂ ಅರಿವಿದೆ. ಪೇಪರ್ ಬ್ಯಾಗ್ ಬಳಸಿ ಪ್ಲಾಸ್ಟಿಕ್ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ನಮ್ಮ ಪರಿಸರದಲ್ಲಿ ಸಾವಿರ ವರ್ಷವಾದರೂ ಕರಗದೆ ಹಾಗೆಯೇ ಉಳಿಯಬಹುದು. ಈ ಭೂಮಿಯು ನಮ್ಮ ಭವಿಷ್ಯದ ಪೀಳಿಗೆಗೆ ಉಳಿಯಬೇಕಾದರೆ ಪ್ಲಾಸ್ಲಿಕ್ ಮುಕ್ತ ಉಪಕ್ರಮಗಳನ್ನು ನಾವು ತೆಗೆದುಕೊಳ್ಳಬೇಕಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತವೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಪೇಪರ್ ಬ್ಯಾಗ್ ಬಳಸಲು ಎಲ್ಲರೂ ಮುಂದಾಗಬೇಕು. ಇಂತಹ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೇಪರ್ ಬ್ಯಾಗ್ ಅಥವಾ ಕಾಗದದ ಚೀಲದ ದಿನ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಜುಲೈ 12 ರಂದು ಪೇಪರ್ ಬ್ಯಾಗ್ ದಿನವನ್ನು ಏಕೆ ಆಚರಿಸಲಾಗುತ್ತದೆ:
ಪೇಪರ್ ಬ್ಯಾಗ್ ದಿನವನ್ನು ಈ ದಿನದಂದು ಆಚರಿಸುವ ನಿಖರವಾದ ಇತಿಹಾಸ ತಿಳಿದಿಲ್ಲ. ಆದರೆ ಈ ದಿನವು ವಿಲಿಯಂ ಗುಡೆಲ್ ರಚಿಸಿದ ಪೇಪರ್ ಬ್ಯಾಗ್ ಯಂತ್ರಕ್ಕೆ ಪೇಟೆಂಟ್ ಸಿಕ್ಕ ದಿನವನ್ನು ನೆನಪಿಸುತ್ತದೆ. ಅವರ ಪೇಪರ್ ಬ್ಯಾಗ್ ತಯಾರಿಸುವ ಯಂತ್ರಕ್ಕೆ 12 ನೇ ಜುಲೈ 1859 ರಂದು ಪೇಟೆಂಟ್ ನೀಡಲಾಯಿತು. ಆದ್ದರಿಂದ ಈ ನೆನಪಿಗಾಗಿ ಪ್ರತಿವರ್ಷವೂ ಈ ದಿನದಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ.
ಪೇಪರ್ ಬ್ಯಾಗ್ ಪ್ರಯೋಜನಗಳು:
• ಕಾಗದದ ಚೀಲಗಳ ಬಳಕೆ ಪರಿಸರ ಸ್ನೇಹಿಯಾಗಿದೆ.
• ಕಾಗದದ ಚೀಲಗಳು ಜೈವಿಕ ವಿಘಟನೀಯ ಮತ್ತು ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡುವುದಿಲ್ಲ.
• ಕಾಗದದ ಚೀಲಗಳನ್ನು ಸುಲಭವಾಗಿ ಮರುಬಳಕೆ ಮಾಡಬಹುದು ಮತ್ತು ಕಾಗದದ ಚೀಲಗಳನ್ನು ಸುಲಭವಾಗಿ ಗೊಬ್ಬರವಾಗಿ ಪರಿವರ್ತಿಸಬಹುದು.