ಎರಡು ಕ್ಷೇತ್ರಗಳಿಗೆ ಟಿಕೆಟ್ ಮಿಸ್ ಆದ ಆಘಾತದ ಬೆನ್ನಲ್ಲೇ ಜಗದೀಶ್ ಶೆಟ್ಟರ್ ಗೆ ಹೊಸ ಆಫರ್; ಯಾವ ಕ್ಷೇತ್ರಕ್ಕೆ?
ಲೋಕಸಭಾ ಚುನಾವಣೆಗೆ ಬಿಜೆಪಿ ಎರಡನೇ ಪಟ್ಟಿ ಪ್ರಕಟಿಸಿದ್ದು, ರಾಜ್ಯದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಆದರೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದಲ್ಲೇ ಭಿನ್ನಮತ, ಅಸಮಾಧಾನದ ಹೊಗೆಯಾಡುತ್ತಿದೆ. ಇದರ ಜೊತೆಗೆ ಕೆಲ ರಾಜಕೀಯ ನಾಯಕರ ವೃತ್ತಿಜೀವನ ಅಂತ್ಯವಾಗುವ ಲಕ್ಷಣಗಳಿವೆ. ಅದರಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಒಬ್ಬರು. ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿ (BJP) ಟಿಕೆಟ್ ದೊರೆಯದೆ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ (Jagadish Shettar) ಅವರ ಮನವೊಲಿಕೆಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಖಾಡಕ್ಕೆ ಇಳಿದಿದ್ದಾರೆ. ಶೆಟ್ಟರ್ಗೆ ದೂರವಾಣಿ ಕರೆ ಮಾಡಿ ಮಾತನಾಡಿರುವ ಅಮಿತ್ ಶಾ, ಬೆಳಗಾವಿಯಿಂದ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸದ್ಯ ಬಿಜೆಪಿ 20 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮುಂದಿನ ಹಂತದ ಅಭ್ಯರ್ಥಿ ಆಯ್ಕೆ ವೇಳೆ ಶೆಟ್ಟರ್ರನ್ನು ಬೆಳಗಾವಿಯಿಂದ ಅಭ್ಯರ್ಥಿಯನ್ನಾಗಿ ಪರಿಗಣಿಸುವ ಸುಳಿವು ನೀಡಿದೆ
ಅಮಿತ್ ಶಾ ಜೊತೆ ಮಾತನಾಡಿರುವ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಯೋಚಿಸಲು ಕಾಲಾವ ಕೇಳಿದ್ದಾರೆ. ಬೆಳಗಾವಿಯಿಂದ ಸ್ಪರ್ಧಿಸಿದರೆ ಸೋಲುವ ಬಗ್ಗೆ ಶೆಟ್ಟರ್ಗೆ ಭೀತಿ ಇದೆ ಎನ್ನಲಾಗಿದೆ. ಹೀಗಾಗಿ ಅವರು ಕಾಲಾವಕಾಶ ಕೇಳಿರುವ ಸಾಧ್ಯತೆ ಇದೆ. ಆದರೆ ಖುದ್ದು ಅಮಿತ್ ಶಾ ಸೂಚನೆ ನೀಡಿರುವುದರಿಂದ ಶೆಟ್ಟರ್ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಶೆಟ್ಟರ್, ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ನಂತರ ಅವರನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಕಾಂಗ್ರೆಸ್ ಮಾಡಿತ್ತು. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಬಿಜೆಪಿ ಪರ ವಾಲಿದ್ದ ಶೆಟ್ಟರ್, ಲೋಕಸಭೆ ಟಿಕೆಟ್ ಆಕಾಂಕ್ಷಿಯೊಂದಿಗೆ ಘರ್ ವಾಪ್ಸಿ ಆಗಿದ್ದರು. ಮರಳಿ ಬಿಜೆಪಿ ಸೇರುವ ಸಂದರ್ಭ ಅವರು ಧಾರವಾಡ ಅಥವಾ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಆದರೆ, ಇದೀಗ ಆ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಧಾರವಾಡದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯನ್ನು ಕಣಕ್ಕಿಳಿಸಲಾಗಿದ್ದರೆ, ಹಾವೇರಿಯಿಂದ ಮಾಜಿ ಸಿಎಂ ಬಬಸವರಾಜ ಬೊಮ್ಮಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಇದರಿಂದ ಶೆಟ್ಟರ್ ನಿರಾಸೆಗೊಂಡಿದ್ದಾರೆ.
ಈ ಮಧ್ಯೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೂ ಅಚ್ಚರಿಯ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲಿಂದ ಸ್ಪರ್ಧೆ ಮಾಡುವಂತೆ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬಳಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಚಿತ್ರದುರ್ಗದಿಂದ ನೀವು ಸ್ಪರ್ಧೆ ಮಾಡಿ. ಮುಂದೆ ನಿಮಗೆ ಸಚಿವ ಅವಕಾಶವಿದೆ. ನಿನ್ನೆ ರಾತ್ರಿ ನಿಮ್ಮ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿದ್ದೇವೆ ಎಂದು ಕಾರಜೋಳ ಬಳಿ ಯಡಿಯೂರಪ್ಪ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.