ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು
ಹಾವೇರಿ: ಭಾವಿ ಪತ್ನಿ ಆಗಬೇಕಿದ್ದವಳೇ ಚಾಕುವಿನಿಂದ ಕತ್ತು ಕೊಯ್ದು ಯುವಕನ ಹತ್ಯೆ (Murder) ಮಾಡಲು ಯತ್ನಿಸಿದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹರಪನಹಳ್ಳಿ ತಾಲೂಕಿನ ಮೈದೂರ ಗ್ರಾಮದ ನಿವಾಸಿ ದೇವೇಂದ್ರಗೌಡ ಮಂಡಗಟ್ಟಿ (30) ಹಲ್ಲೆಗೊಳಗಾದ ಯುವಕ. ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದ 17 ವರ್ಷದಾಕೆಗೆ ದೇವೇಂದ್ರಗೌಡನ ಜೊತೆಗೆ ವಿವಾಹ ನಿಶ್ಚಿತಾರ್ಥ (Engagement) ಮಾಡಲಾಗಿತ್ತು. ಏಪ್ರಿಲ್ 6 ರಂದು ಆಕೆಯ ಬರ್ತ್ಡೇ (Birthday) ಇದ್ದಿದ್ದರಿಂದ ಡ್ರೆಸ್ ಹಾಗೂ ಗಿಫ್ಟ್ ಕೊಡಿಸಬೇಕು ಎಂದು ಬಂದಿದ್ದ ಭಾವಿ ಪತಿಗೆ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆಗೆ ಯತ್ನಿಸಿದ್ದಾಳೆ. ಹತ್ಯೆಗೆ ಯತ್ನಿಸಿದಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವೇಂದ್ರಗೌಡ ಹಾಗೂ ಹುಡುಗಿ ಬರ್ತ್ಡೇ ದಿನ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದರು. ನಂತರ ಯುವಕ ಆಕೆಯನ್ನು ರಾಣೇಬೆನ್ನೂರು (Ranebennur) ನಗರದ ಹೊರವಲಯದಲ್ಲಿರುವ ಸ್ವರ್ಣ ಪಾರ್ಕಿಗೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭ ಹುಡುಗಿ ಆತನ ಕುತ್ತಿಗೆ ಸೀಳಿ ಅಲ್ಲಿಂದ ಪರಾರಿಯಾಗಿದ್ದಾಳೆ. ಪಾರ್ಕಿನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ನೋಡಿದ ದಾರಿಹೋಕರು ತಕ್ಷಣವೇ ಪೊಲೀಸರು ಹಾಗೂ ಅಂಬುಲೆನ್ಸ್ಗೆ ತಿಳಿಸಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಂಬುಲೆನ್ಸ್ ಸಿಬ್ಬಂದಿ ಸಿದ್ದು ಎಂಬವರು ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ (Davangere) ಆಸ್ಪತ್ರೆಗೆ ದಾಖಲಿಸಿದರು.
ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಹಲಗೇರಿ ಠಾಣೆ ಪೊಲೀಸರು ಯುವಕನ ಕತ್ತು ಕೊಯ್ದವಳಿಗಾಗಿ ಹುಡುಕಾಟ ನಡೆಸಿದರು. ಕಾರ್ಯಾಚರಣೆ ನಡೆಸಿದ ಕೆಲವೇ ಗಂಟೆಗಳಲ್ಲಿ ಆಕೆಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಬಳಿಕ ನಿಜಾಂಶ ಬೆಳಕಿಗೆ ಬಂದಿದೆ.