ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಟಿ ಶೆರ್ಲಿನ್
ಬಾಲಿವುಡ್ ನಟಿ, ವಿವಾದಿತ ತಾರೆ ಶೆರ್ಲಿನ್ ಚೋಪ್ರಾ (Sherlyn Chopra) ಉದ್ಯಮಿಯೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋ ಆಲ್ಬಂ ಮಾಡೋಣ ಎಂದು ಹೇಳಿಕೊಂಡ ಬಂದ ವ್ಯಕ್ತಿ ಅಸಭ್ಯವಾಗಿ ತಮ್ಮೊಂದಿಗೆ ನಡೆದುಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ದಾಖಲಿಸಿದ್ದಾರೆ.
ಮುಂಬೈ (Mumbai) ಮೂಲದ ಉದ್ಯಮಿ (Businessman) ಸುನಿಲ್ ಪರಸ್ಮಾನಿ ಲೋಧಾ (Sunil Parasmani Lodha) ಎನ್ನುವವರು ಸದ್ಯ ದುಬೈನಲ್ಲಿದ್ದಾರೆ. ಶೆರ್ಲಿನ್ ಜೊತೆ ಆಲ್ಬಂ ಸಾಂಗ್ ಮಾಡುವುದಕ್ಕಾಗಿಯೇ ದುಬೈನಿಂದ ಬಂದಿದ್ದೇನೆ ಎಂದು ಹೇಳಿಕೊಂಡು ಹೋಟೆಲ್ ಗೆ ಕರೆಯಿಸಿಕೊಂಡಿದ್ದಾರೆ. ಮಾತುಕತೆಯ ನಂತರ ತನ್ನದು ಕಾರು ಇಲ್ಲ, ಹಾಗಾಗಿ ಶೆರ್ಲಿನ್ ಗೆ ಡ್ರಾಪ್ ಕೇಳಿದ್ದಾರೆ. ಶೆರ್ಲಿನ್ ತಮ್ಮ ಮನೆಗೆ ಮೊದಲು ಡ್ರಾಪ್ ಮಾಡಿಸಿಕೊಂಡು, ಆಮೇಲೆ ಉದ್ಯಮಿಯನ್ನು ಬಿಟ್ಟು ಬರಲು ಡ್ರೈವರ್ ಗೆ ಸೂಚಿಸಿದ್ದಾರೆ.
ಶೆರ್ಲಿನ್ ಮನೆ ಬರುತ್ತಿದ್ದಂತೆಯೇ ‘ನಿಮ್ಮ ಮನೆಯನ್ನು ನೋಡಬಹುದಾ?’ ಎಂದು ಕೇಳಿದನಂತೆ ಆ ಉದ್ಯಮಿ. ಮನೆ ನೋಡಲು ಕರೆದುಕೊಂಡು ಹೋಗಿದ್ದಾರೆ ಶೆರ್ಲಿನ್. ಆನಂತರ ಮಾತುಕತೆ ಆಡುತ್ತಾ ಉದ್ಯಮಿ ಅಲ್ಲಿಯೇ ಊಟ ಮಾಡಿದ್ದಾನೆ. ನಂತರ ನೀನು ಸಖತ್ ಹಾಟ್ ಆಗಿ ಕಾಣ್ತಿದ್ದೀಯಾ, ನನ್ನಿಂದ ಕಂಟ್ರೋಲ್ ಮಾಡ್ಕೊಳ್ಳೋಕೆ ಆಗ್ತಿಲ್ಲ ಎಂದು ಕಿರುಕುಳ ಶುರು ಮಾಡಿದ್ದಾನೆ. ಅಲ್ಲಿಂದ ಆತನನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ ಶೆರ್ಲಿನ್. ಜಾರ್ಜರ್ ಕೇಳುವ ನೆಪದಲ್ಲಿ ಮತ್ತೆ ಬಂದು ಕಿರುಕುಳ ನೀಡಿದನಂತೆ. ಇವಿಷ್ಟನ್ನೂ ಪೊಲೀಸ್ ದೂರಿನಲ್ಲಿ ಬರೆದಿದ್ದಾರೆ ಶೆರ್ಲಿನ್.
ನಟಿ ಕೊಟ್ಟ ದೂರಿನನ್ವಯ ಆ ಉದ್ಯಮಿಯ ವಿರುದ್ಧ ಜುಹಾ (Juha) ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 354, 506, 509ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸ್, ಕೋರ್ಟ್ ವಿಚಾರದಲ್ಲಿ ಶೆರ್ಲಿನ್ ಸದಾ ಸುದ್ದಿಯಲ್ಲಿ ಇರುತ್ತಾರೆ. ಈ ಹಿಂದೆ ಈಕೆ ಮತ್ತು ಈಕೆಯ ಗೆಳತಿ ರಾಖಿ ಸಾವಂತ್ ಇಂಥದ್ದೇ ಮತ್ತೊಂದು ವಿಚಾರಕ್ಕೆ ಕೋರ್ಟ್ ಮೆಟ್ಟಿಲು ಏರಿದ್ದರು. ನಂತರ ಕೇಸ್ ವಾಪಸ್ಸು ಪಡೆದು ಸ್ನೇಹಿತೆಯರಾಗಿದ್ದಾರೆ.