ಉದ್ಧವ್ ಠಾಕ್ರೆಗೆ ತೀವ್ರ ಮುಖಭಂಗ; ಏಕನಾಥ್ ಶಿಂಧೆ ಬಣ ಪಾಲಾದ ಶಿವಸೇನೆಯ ‘ಬಿಲ್ಲು ಬಾಣ’ ಚಿಹ್ನೆ
ನವದೆಹಲಿ: ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ.
ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.
ತಮ್ಮ ಬಣವವೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವಣಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ’ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿದೆ.
ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದೆ. ಪಕ್ಷದ ಚಿಹ್ನೆ ವಿವಾದ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಆದೇಶ ನೀಡಿದೆ ಚುನಾವಣಾ ಆಯೋಗದ ಆದೇಶವನ್ನು ‘ಸುಪ್ರೀಂ ಕೋರ್ಟ್’ನಲ್ಲಿ ಪ್ರಶ್ನಿಸುತ್ತೇವೆ ಎಂದು ಮಾಜಿ ಸಿಎಂ ಉದ್ಧವ್ ಬಣದ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಏಕನಾಥ್ ಶಿಂಧೆಗೆ ಚಿಹ್ನೆ ಒಲಿದ ಬಗ್ಗೆ ಉದ್ಧವ್ ಬಣದ ನಾಯಕ ಆನಂದ್ ದುಬೆ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ಆದೇಶದ ಬಗ್ಗೆ ನಮಗೆ ಅನುಮಾನವಿತ್ತು. ನಾವು ಚುನಾವಣಾ ಆಯೋಗವನ್ನು ನಂಬುವುದಿಲ್ಲ. ಇದೇ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಈ ಮಧ್ಯೆ ಚುನಾವಣಾ ಆಯೋಗ ಆತುರದ ನಿರ್ಧಾರ ಮಾಡಿದೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡಿದೆ. ನಾವು ಆಯೋಗ ಕ್ರಮವನ್ನು ಖಂಡಿಸುತ್ತೇವೆ ಎಂದಿದ್ದಾರೆ.
ಈ ಹಿಂದೆ ಅಂಧೇರಿ ಪೂರ್ವ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಎರಡು ಬಣಗಳು ಶಿವಸೇನೆ ಚಿಹ್ನೆ ಬಳಸಬಾರದು ಎಂದು ಚುನಾವಣಾ ಆಯೋಗ ಹೇಳಿತ್ತು. ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಂದಿನ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಶಾಸಕರು ಠಾಕ್ರೆ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಬಳಿಕ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿಕೊಂಡು ಸರ್ಕಾರ ರಚಿಸಿದ್ದರು. ಬಳಿಕ ಚಿಹ್ನೆಗಾಗಿ ಎರಡು ಬಣಗಳ ನಡುವೆ ಗುದ್ದಾಟ ಶುರುವಾಗಿತ್ತು.