ಉಡುಪಿ: ಸೈಂಟ್ ಮೇರಿಸ್ ದ್ವೀಪದ ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಪ್ರವಾಸಿಗನ ಮೇಲೆ ಸಿಬಂದಿ ದರ್ಪ
ಉಡುಪಿ, ಜ 17 : ಉಡುಪಿ ಸೈಂಟ್ ಮೇರಿಸ್ ದ್ವೀಪದ ಅವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ ಪ್ರವಾಸಿಗರ ಮೇಲೆ ಸೈಂಟ್ ಮೇರಿಸ್ ದ್ವೀಪದ ನಿರ್ವಹಣಾ ಸಿಬ್ಬಂದಿ ದರ್ಪ ತೋರಿಸಿದ ಘಟನೆ ನಡೆದಿದೆ.
ದ್ವೀಪದೊಳಗಡೆ ಕ್ಯಾಮರಾ ನಿಷೇಧವಿದ್ದರೂ, ಶುಲ್ಕ ಪಾವತಿಸಿ ಲಗೇಜ್ ರೂಂನಲ್ಲಿ ಕ್ಯಾಮರಾ ಇಡಬಹುದು. ಆದರೆ ಇಲ್ಲಿ ಸುರಕ್ಷಿತವಾಗಿ ಕ್ಯಾಮರಾ ಇಡಲು ಯಾವುದೇ ವ್ಯವಸ್ಥೆ ಇಲ್ಲ. ಬಾಗಿಲೇ ಇಲ್ಲದ ರೂಂನಲ್ಲಿ ಲಕ್ಷಾಂತರ ಮೌಲ್ಯದ ಕ್ಯಾಮರಾ ಹೇಗೆ ಇಡುವುದು ಎಂದು ಪ್ರವಾಸಿಗನೊಬ್ಬ ಪ್ರಶ್ನಿಸಿದ್ದಾರೆ. ಆದರೆ ಇದಕ್ಕೆ ಕ್ಯಾಮರಾ ತೆಗೆದು ಬಿಸಾಡುತ್ತೇನೆ ಎಂಬುದಾಗಿ ದ್ವೀಪದ ನಿರ್ವಹಣಾ ಸಿಬಂದಿ ದರ್ಪದಿಂದ ಉತ್ತರಿಸಿದ್ದಾರೆ.
ಪ್ರವಾಸಿಗರನ್ನು ಸಿಬಂದಿಯು ಏಕವಚನದಲ್ಲೇ ಮಾತನಾಡಿಸಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ.
ಇನ್ನು ಸೀ ವಾಕ್‌ನಲ್ಲಿ ಕ್ಯಾಮರಾ ಪ್ರವೇಶಕ್ಕೆ ಹಣ ಪಾವತಿ ಮಾಡಿದ್ದರೂ, ಸೈಂಟ್ ಮೇರೀಸ್‌ನಲ್ಲಿ ಕ್ಯಾಮರಾಕ್ಕೆ ಅವಕಾಶ ಇಲ್ಲ. ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳುವ ಬೋಟ್‌ನಲ್ಲಿ ದುಬಾರಿ ದರ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವ್ಯವಸ್ಥೆ ಆಗರವಾದರೂ ಉಡುಪಿ ಜಿಲ್ಲಾಡಳಿತ ಮೌನವಾಗಿದೆ ಎಂದು ಆಪಾದಿಸಿದ್ದಾರೆ. ಸೈಂಟ್ ಮೇರಿಸ್ ದ್ವೀಪದ ನಿರ್ವಹಣೆ ಜವಾಬ್ದಾರಿಯನ್ನು ಮಲ್ಪೆ ಅಭಿವೃದ್ಧಿ ಸಮಿತಿ ಹೊತ್ತಿದೆ. ಪ್ರವಾಸಿಗ ಹಾಗೂ ಸಿಬ್ಬಂದಿ ನಡುವಿನ ವಾಗ್ವಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.