ಇಂದು (ಫೆ.25) ಪುದು ಗ್ರಾಮ ಪಂಚಾಯತ್ ಚುನಾವಣೆ, 2 ಸ್ಥಾನಗಳಿಗೆ ಉಪ ಚುನಾವಣೆ

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಮತ್ತು ಅನಂತಾಡಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಗಳು ತಲಾ ಒಂದು ಸ್ಥಾನಕ್ಕೆ ಫೆ.25 ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಆಡಳಿತ ಅಧಿಕಾರಿಗಳು ಸರ್ವ ಸಿದ್ಧತೆಯೊಂದಿಗೆ ಶುಕ್ರವಾರ ಬೂತ್ ಕಡೆಗೆ ತೆರಳಿದ್ದಾರೆ.
ಅವಧಿ ಮುಗಿದ ಪುದು ಗ್ರಾ.ಪಂ.ನಲ್ಲಿ 10 ವಾರ್ಡ್ ಗಳಲ್ಲಿ 34 ಸದಸ್ಯ ಸ್ಥಾನಗಳಿಗೆ 99 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಣಯವಾಗಲಿದೆ.
ಇದರ ಜೊತೆ ವಿವಿಧ ಕಾರಣದಿಂದ ತೆರವಾದ ನೆಟ್ಲಮುಡ್ನೂರು ಹಾಗೂ ಅನಂತಾಡಿ ಗ್ರಾಮ ಪಂಚಾಯತ್ ಗಳಿಗೆ ತಲಾ ಒಂದು ಸ್ಥಾನಗಳಿಗೆ ತಲಾ ಎರಡು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಪುದುವಿನಲ್ಲಿ 10 ಬೂತ್ ಗಳಿದ್ದು ಒಂದು ಆಕ್ಸಿಲರಿ ಬೂತ್ ಇದೆ. ಅನಂತಾಡಿ ಮತ್ತು ನೆಟ್ಲಮುಡ್ನೂರು ಉಪ ಚುನಾವಣೆಗೆ ತಲಾ 1 ಬೂತ್, ಪ್ರತಿ ಬೂತ್ ಗೂ ಐದೈದು ಸಿಬ್ಬಂದಿಗಳನ್ನು ಕಳುಹಿಸಲಾಗಿದೆ.
ಒಟ್ಟು 65 ಸಿಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈ ಬಾರಿ ಮತಪತ್ರದ ಮೂಲಕ ಚುನಾವಣೆ ನಡೆಯಲಿದ್ದು ಬೆಳಿಗ್ಗೆ 7 ರಿಂದ ಸಂಜೆ 5 ರ ತನಕ ಮತದಾನ ನಡೆಯಲಿದೆ.
ಪುದು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 13,000 ಮತದಾರರು ಇದ್ದು 99 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 28ರಂದು ಮಂಗಳವಾರ ಅಭ್ಯರ್ಥಿಗಳ ಮತ ಎಣಿಕೆ ನಡೆಯಲಿದೆ.
ಪುದು ಗ್ರಾಮಪಂಚಾಯತ್ ನ ಚುನಾವಣಾ ಹಿನ್ನೆಲೆಯಲ್ಲಿ 11 ಬೂತ್ ಗೆ 22 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ನಾಲ್ಕು ಎಸ್ಸೈ, ಆರು ಎಎಸೈ ಮೂರು ಜೀಪು, ಎರಡು ಬೈಕ್ ಗಳಲ್ಲಿ ಪೊಲೀಸರು ರೌಂಡ್ಸ್ ನಲ್ಲಿರುತ್ತಾರೆ. ಚುನಾವಣೆ ನಡೆಯುವ ಹಾಗೂ ಪರಂಗಿಪೇಟೆ ಪರಿಸರದಲ್ಲಿ ಎರಡು ಕೆಎಸ್ಸಾರ್ಪಿ ಬಸ್ ಗಳನ್ನು ಹಾಕಲಾಗಿದೆ ಎಂದು ಪೋಲೀಸ್ ಇಲಾಖೆ ತಿಳಿಸಿದೆ.