ಇಂದು ಕಿತ್ತೂರು ಕರ್ನಾಟಕ ಬೆಳಗಾವಿಯಲ್ಲಿ ರಾಹುಲ್ ಗಾಂಧಿ ಹವಾ

ಬೆಳಗಾವಿ: ಕಿತ್ತೂರು ಕರ್ನಾಟಕದ ಬೆಳಗಾವಿಯಿಂದ ರಾಹುಲ್ ಗಾಂಧಿ ಚುನಾವಣಾ ರಣಕಹಳೆ ಮೊಳಗಿಸಲಿದ್ದು, ಸೋಮವಾರ ಬೆಳಗಾವಿಯಲ್ಲಿ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಲಿದ್ದಾರೆ.
ನಗರದ ಸಿಪಿಎಡ್ ಮೈದಾನದಲ್ಲಿ ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿ ಹಲವರು ಭಾಗಿಯಾಗಲಿದ್ದಾರೆ. ಭಾನುವಾರ ರಾತ್ರಿಯೇ ಬೆಳಗಾವಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದಾರೆ.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿರುವ ಯುವಕ್ರಾಂತಿ ಸಮಾವೇಶ ಭಾರತ್ ಜೋಡೋ ಯಾತ್ರೆ ಬಳಿಕ ಮೊದಲ ಸಮಾವೇಶವಾಗಿದ್ದು, ಬೆಳಗಾವಿ (Belagavi) ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿ 50 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಿತ್ತೂರು ಕರ್ನಾಟಕ ಭಾಗದ 10 ಸಂಘಟನಾತ್ಮಕ ಜಿಲ್ಲೆಗಳ ಯುವ ಕಾಂಗ್ರೆಸ್ (Congress) ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ನಗರ, ಗದಗ, ಹಾವೇರಿ, ಉತ್ತರ ಕನ್ನಡ ಸಂಘಟನಾತ್ಮಕ ಜಿಲ್ಲೆಗಳ ಕಾರ್ಯಕರ್ತರ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮಿಸಲಿರುವ ರಾಹುಲ್ ಗಾಂಧಿ, ಮಧ್ಯಾಹ್ನ 1 ಗಂಟೆಗೆ ಸಿಪಿಎಡ್ ಮೈದಾನಕ್ಕೆ ಬರಲಿದ್ದಾರೆ. ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಯುವ ಕ್ರಾಂತಿ ಸಮಾವೇಶದಲ್ಲಿ ಯುವಕರಿಗಾಗಿಯೇ ಕಾಂಗ್ರೆಸ್ ಹೊಸ ಗ್ಯಾರಂಟಿ ಕಾರ್ಡ್ ಅನ್ನು ರಾಹುಲ್ ಗಾಂಧಿ ಘೋಷಣೆ ಮಾಡಲಿದ್ದಾರೆ.
ರಾಹುಲ್ ಗಾಂಧಿ ಆಗಮನದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರ ಕರೆತರಲು ನಾಯಕರು, ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಟಾಸ್ಕ್ ನೀಡಿದ್ದಾರೆ. ಬೆಳಗಾವಿ ನಗರದಾದ್ಯಂತ ಕಾಂಗ್ರೆಸ್ ನಾಯಕರ ಕಟೌಟ್‌ಗಳು, ಬ್ಯಾನರ್, ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿವೆ. ಇತ್ತೀಚೆಗೆ ಡಿಕೆಶಿ ನೇತೃತ್ವದ ಪ್ರಜಾಧ್ವನಿ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಅಭಯ ಹಸ್ತ ಚಿಹ್ನೆಗೆ ಹೊಸ ರೇಖೆ ಸೇರ್ಪಡೆಯಾಗಿದ್ದು ಕಂಡು ಬಂದಿತ್ತು. ಬೆಳಗಾವಿಯಲ್ಲಿ ಕಟ್ಟಿದ ಕಾಂಗ್ರೆಸ್ ಧ್ವಜಗಳಲ್ಲಿ ಇದೇ ಮಾದರಿಯ ಚಿಹ್ನೆ ಬಳಕೆ ಮಾಡಲಾಗಿದೆ.