ಇಂದಿನಿಂದ ಕರ್ನಾಟಕ vs ಸೌರಾಷ್ಟ್ರ ಸೆಮೀಸ್ ಫೈಟ್

ಬೆಂಗಳೂರು(ಫೆ.08): 2022-23ರ ರಣಜಿ ಟ್ರೋಫಿ ಟೂರ್ನಿಯ ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದ್ದು, 8 ಬಾರಿ ಚಾಂಪಿಯನ್ ಕರ್ನಾಟಕ ಬುಧವಾರದಿಂದ ಬದ್ಧವೈರಿ ಸೌರಾಷ್ಟ್ರ ವಿರುದ್ಧ ಕಾದಾಡಲಿದೆ. ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಅಂಕಿ-ಅಂಶಗಳ ಆಧಾರದಲ್ಲಿ ರಾಜ್ಯದ ವಿರುದ್ಧ ಸೌರಾಷ್ಟ್ರ ಉತ್ತಮ ದಾಖಲೆ ಹೊಂದಿದ್ದರೂ ಕರ್ನಾಟಕ ತವರಿನ ಅಂಗಳದ ಲಾಭವೆತ್ತುವ ನಿರೀಕ್ಷೆಯಲ್ಲಿದೆ. ಕಳೆದ ವರ್ಷ ಕ್ವಾರ್ಟರ್ನಲ್ಲೇ ಮುಗ್ಗರಿಸಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದ್ದು, ಸೌರಾಷ್ಟ್ರ 2019-20ರ ಬಳಿಕ ಮತ್ತೊಮ್ಮೆ ಫೈನಲ್ಗೇರಲು ಕಾಯುತ್ತಿದೆ.
ಎಲೈಟ್ ‘ಸಿ’ ಗುಂಪಿನಿಂದ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದ್ದ ರಾಜ್ಯ ತಂಡ ಕ್ವಾರ್ಟರ್ನಲ್ಲಿ ಉತ್ತರಾಖಂಡವನ್ನು ಸೋಲಿಸಿತ್ತು. ಮತ್ತೊಂದೆಡೆ ಸೌರಾಷ್ಟ್ರ ಅಂತಿಮ 8ರ ಘಟ್ಟದಲ್ಲಿ ಪಂಜಾಬ್ ವಿರುದ್ಧ ಜಯಿಸಿತ್ತು. ರಾಜ್ಯ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿ ತೋರುತ್ತಿದ್ದು, ನಾಯಕ ಮಯಾಂಕ್, ಆರ್.ಸಮರ್ಥ್ ತಂಡದ ಬ್ಯಾಟಿಂಗ್ ಬಲ. 8 ಪಂದ್ಯಗಳಲ್ಲಿ ಮಯಾಂಕ್ 686, ಸಮರ್ಥ್ 659 ರನ್ ಕಲೆಹಾಕಿದ್ದಾರೆ. ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಸ್ ಕೂಡಾ ಲಯದಲ್ಲಿದ್ದು, ಲಯ ಕಂಡುಕೊಳ್ಳುತ್ತಿದ್ದ ಬಿ.ಆರ್.ಶರತ್ ಅನಾರೋಗ್ಯದ ಕಾರಣ ಹೊರಬಿದ್ದಿದ್ದು ಅವರ ಬದಲು ತಂಡಕ್ಕೆ ಸೇರ್ಪಡೆಗೊಂಡಿರುವ ನಿಹಾಲ್ ಉಳ್ಳಾಲ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಜೊತೆ ಬೌಲಿಂಗ್ನಲ್ಲೂ ತಮ್ಮ ನೈಜ ಆಟ ಪ್ರದರ್ಶಿಸಿದರೆ ಕರ್ನಾಟಕವನ್ನು ಕಟ್ಟಿಹಾಕಲು ಸೌರಾಷ್ಟ್ರಕ್ಕೆ ಕಷ್ಟವಾಗಬಹುದು. ಪ್ರಸಿದ್್ಧ ಕೃಷ್ಣ, ರೋನಿತ್ ಮೋರೆ ಅನುಪಸ್ಥಿತಿಯಲ್ಲೂ ವೇಗಿಗಳಾದ ವಿದ್ವತ್ ಕಾವೇರಪ್ಪ, ವೈಶಾಖ್, ವಾಸುಕಿ ಕೌಶಿಕ್ ಹಾಗೂ ಪಾದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಗೊಂಚಲು ಪಡೆದಿದ್ದ ವೆಂಕಟೇಶ್ ಮತ್ತೊಮ್ಮೆ ಎದುರಾಳಿ ಬ್ಯಾಟರ್ಗಳನ್ನು ಕಾಡಲು ಸಜ್ಜಾಗಿದ್ದಾರೆ.