ಇಂದಿನಿಂದ IPL 2023 ಆರಂಭ; ಅಭಿಮಾನಿಗಳನ್ನ ರಂಜಿಸಲಿದ್ದಾರೆ ರಶ್ಮಿಕಾ ಮಂದಣ್ಣ, ಮಿಲ್ಕಿ ಬ್ಯೂಟಿ ತಮನ್ನಾ
ಕಳೆದ ಕೆಲವು ತಿಂಗಳುಗಳಿಂದ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ (IPL 2023) ಮತ್ತೆ ಬಂದಿದೆ. 16ನೇ ಆವೃತ್ತಿಯ IPL ಗೆ ಇಂದು ಚಾಲನೆ ಸಿಗಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ಹಾಗೂ ಎಂಎಸ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ (GT vs CSK) ಮುಖಾಮುಖಿ ಆಗಲಿದೆ. ಹಾಲಿ ಚಾಂಪಿಯನ್ ಜಿಟಿ ಈ ಬಾರಿ ಮತ್ತಷ್ಟು ಬಲಿಷ್ಠವಾಗಿದ್ದರೆ ಇತ್ತ ಸಿಎಸ್ಕೆಯಲ್ಲಿ ಅನುಭವಿ ಆಟಗಾರರ ದಂಡೇ ಇದೆ. ಅಲ್ಲದೆ ಇದು ಧೋನಿಗೆ ಕೊನೆಯ ಐಪಿಎಲ್. ಹೀಗೆ ಅನೇಕ ಕಾರಣಗಳಿಗೆ ಮೊದಲ ಪಂದ್ಯವೇ ರೋಚಕತೆ ಸೃಷ್ಟಿಸಿದೆ.
ಗುಜರಾತ್ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಸಂಜೆ 7.30ಕ್ಕೆ ಮೊದಲ ಪಂದ್ಯ ಆರಂಭವಾಗಲಿದೆ. ಇದಕ್ಕೂ ಮುನ್ನ ಸಂಜೆ 6 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಖ್ಯಾತ ನಟಿಯರಾದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸೊಂಟ ಬಳುಕಿಸಲಿದ್ದಾರೆ.
ಇತ್ತೀಚೆಗೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಹಾಗೂ ಕೃತಿ ಸನೋನ್ ಭರ್ಜರಿ ಡಾನ್ಸ್ ಮಾಡಿ ಗಮನ ಸೆಳೆದಿದ್ದರು. ಇದೀಗ 16ನೇ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ತಮನ್ನಾ ಹಾಗೂ ರಶ್ಮಿಕಾ ಭರ್ಜರಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದರೊಂದಿಗೆ ಸ್ಟಾರ್ ಸಿಂಗರ್ ಅರ್ಜಿತ್ ಸಿಂಗ್ ಸಹ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಂತರ ಪಂದ್ಯ ಆರಂಭವಾಗಲಿದೆ ಎಂದು ಐಪಿಎಲ್ ಸಮಿತಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ಮಾರ್ಚ್ 31 ರಿಂದ ಮೇ 21ರ ವರೆಗೆ ಲೀಗ್ ಹಂತದಲ್ಲಿ 18 ಡಬಲ್ ಹೆಡರ್ ಸೇರಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ. ಕೊನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ನಾಲ್ಕು ತಂಡಗಳು ಪ್ಲೇ ಆಫ್ ಪ್ರವೇಶಿಸಲಿವೆ. ಮೇ 23-26ರ ವರೆಗೆ ಪ್ಲೇ-ಆಫ್ ಪಂದ್ಯಗಳು ನಡೆಯಲಿದ್ದು, ಮೇ 28ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.