ಆಸ್ತಿ ಜಪ್ತಿಗೆ ಹೆದರಲ್ಲ, ನನಗೆ ಲಕ್ಷ್ಮೀ ಕೃಪೆ ಇದೆ, ಗಂಗಾವತಿ ಅಭಿವೃದ್ಧಿ ಮಾಡೋದೆ ನನ್ನ ಗುರಿ: ಜನಾರ್ದನ ರೆಡ್ಡಿ
ಕೊಪ್ಪಳ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಆಸ್ತಿಪಾಸ್ತಿ ಜಪ್ತಿ ಮಾಡುವುದಕ್ಕೆ ನಾನು ಹೆದರುವುದಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬುಧವಾರ ಹೇಳಿದ್ದಾರೆ.
ಅಕ್ರಮ ಗಣಿ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಸೇರಿದ 219 ಹೆಚ್ಚುವರಿ ಆಸ್ತಿಗಳ ಜಪ್ತಿಗಾಗಿ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ರೆಡ್ಡಿ, ನಾನು ಜೈಲಿನಲ್ಲಿ 4X5 ಅಡಿ ಜಾಗದಲ್ಲಿ ಇದ್ದವನು. ಆಸ್ತಿ ಜಪ್ತಿಗೆ ಹೆದರುವುದಿಲ್ಲ ಎಂದರು.
ಗಂಗಾವತಿಯಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ, ನನ್ನ ಬಂಧನದ ಸಮಯದಲ್ಲಿ 1,200 ಕೋಟಿ ರೂಪಾಯಿ ಆಸ್ತಿ ಜಪ್ತಿ ಮಾಡಿದ್ದರು. ಆದರೆ ಹೈಕೋರ್ಟ್ನಲ್ಲಿ ಗೆದ್ದಿದ್ದೆ, ಈಗ ‘ಸುಪ್ರೀಂ’ ಮೆಟ್ಟಿಲೇರಿದ್ದಾರೆ. ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ನನ್ನ ಸ್ಪೀಡ್ ಜಾಸ್ತಿಯಾಗಿದೆ. 1,200 ಕೋಟಿ ಇದ್ದ ಆಸ್ತಿ 4,000 ಕೋಟಿಯಾಗಿದೆ. ಹನುಮ ಹುಟ್ಟಿದ ನಾಡಿಗೆ ನಾನು ಬಂದಿದ್ದೇನೆ, ನನಗೆ ಲಕ್ಷ್ಮೀ ಕೃಪೆ ಇದೆ. ಇನ್ಮುಂದೆ ನಾನು ಕಣ್ಣೀರು ಹಾಕಲ್ಲ. ನನ್ನ ಕಣ್ಣೀರು 12 ವರ್ಷದ ಹಿಂದೆಯೇ ಮುಗಿದಿದೆ ಎಂದು ಹೇಳಿದರು.
ಯಾರೂ ಏನೇ ಮಾಡಿದ್ರೂ ನಾನು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಗಂಗಾವತಿ ಅಭಿವೃದ್ಧಿ ಮಾಡೋದೆ ನನ್ನ ಗುರಿ. ಚುನಾವಣೆಗೆ ಇನ್ನೂ 3 ತಿಂಗಳಿದೆ, ಏನೇನು ಆಗುತ್ತೋ ನೋಡೋಣ. ನನ್ನ ಮೇಲೆ ಕೋರ್ಟ್ನಲ್ಲಿ ಆರೋಪವಿದೆ, ಅದೆಲ್ಲ ಬಯಲಿಗೆ ಬರುತ್ತೆ. ಅದು ಗೊತ್ತಾದ ಮೇಲೆಯೇ ನನ್ನ ಉಸಿರು ಹೋಗೋದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದರು.